ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ದೊರೆಯಿತು.;

Update: 2024-09-06 08:42 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದರು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ದೊರೆಯಿತು.

ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ರಾಜಣ್ಣ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿ ಐದು ತಾಲ್ಲೂಕುಗಳ ಶಾಸಕರು, ಚುನಾಯಿತ ಪ್ರತಿನಿಧಿಗಳು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

ಇದು ಎರಡು ಹಂತದ ಯೋಜನೆ. ಮೊದಲ ಹಂತ ಉದ್ಘಾಟನೆಯಾಗಿದೆ. ಎರಡನೇ ಹಂತ 2027 ಕ್ಕೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆ ಎಂದು ಮುಖ್ಯಮಂತ್ರಿ  ಸ್ಪಷ್ಟ ಭರವಸೆ ನೀಡಿದರು.

"ಹೀಗಿದ್ದರೂ ಕೆಲವರು, ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಕೆಲವರು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ," ಎಂದು ಕರೆ ನೀಡಿದರು. "ಎತ್ತಿನಹೊಳೆಗೆ ನನ್ನ ಕಾಲದಲ್ಲೇ ಭೂಮಿಪೂಜೆ ಆಗಿತ್ತು. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀವಿ. ಕೆರೆಗಳನ್ನು ತುಂಬಿಸಿಯೇ ತೀರುವುದೂ ಶತಸಿದ್ಧ," ಎಂದು ಹೇಳಿದರು.

ಅದಕ್ಕೆ ಮುನ್ನ ಡಿಸಿ 3- ಪಂಪ್ ಹೌಸ್ ನಲ್ಲಿ ಮೈಸೂರಿನ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಂಕಲ್ಪ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಕಲೇಶಪುರ ಶಾಸಕ ಎಸ್ ಮಂಜುನಾಥ್ (ಸಿಮೆಂಟ್ ಮಂಜು), ಜಿಲ್ಲಾಧಿಕಾರಿ ಸತ್ಯಭಾಮ, ವಿಶ್ವೇಶ್ವರಯ್ಯ ಜಲ ನಿಗಮ ಎಂಡಿ ಮತ್ತಿತರರು ಉಪಸ್ಥಿತರಿದ್ದರು.

ಏನಿದು ಯೋಜನೆ?

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಜೊತೆಗೆ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.953 ಟಿ.ಎಂ.ಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ. 50 ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವ ರೂ.23,251.66 ಕೋಟಿಗಳ ಮೊತ್ತದ ಉದ್ದೇಶಿತ ರಾಜ್ಯದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ಈಗ ಉದ್ಘಾಟನೆಯಾಗಿದೆ.

2014ರಲ್ಲಿ ಆರಂಭಗೊಂಡ ಯೋಜನೆಯ ಮೊದಲನೇ ಹಂತದ ಏತ (Lift) ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಜುಲೈ-2024ರ ಅಂತ್ಯದವರೆಗೆ ಒಟ್ಟಾರೆ ರೂ.16,152 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ಯೋಜನೆಯನ್ನು 2026-27ನೇ ಸಾಲಿನಲ್ಲಿ 31-03-2023 ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. 2026-27ನೇ ಸಾಲಿನಲ್ಲಿ 31.03.2027ರ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.

Tags:    

Similar News