BJP Infighting | ಬಿಜೆಪಿ ಬಣ ಸಂಘರ್ಷಕ್ಕೆ ಹೈಕಮಾಂಡ್‌ ಬ್ರೇಕ್‌: ನೋಟಿಸ್‌ಗೆ ಉತ್ತರ ನೀಡಿದ ಯತ್ನಾಳ್‌

ನಿಮ್ಮ ವಕ್ಫ್‌ ಹೋರಾಟ ಉತ್ತಮವಾಗಿದೆ. ಬಣ ರಾಜಕೀಯದ ಬಗ್ಗೆ ಬೀದಿಯಲ್ಲಿ ಮಾತನಾಡಬಾರದು. ನಿಮ್ಮ ದೂರುಗಳು ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯಾಗಬೇಕು ಎಂದು ಯತ್ನಾಳ್‌ ಅವರಿಗೆ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Update: 2024-12-05 08:24 GMT
BJP Infighting | ಬಿಜೆಪಿ ಬಣ ಸಂಘರ್ಷಕ್ಕೆ ಹೈಕಮಾಂಡ್‌ ಬ್ರೇಕ್‌: ನೋಟಿಸ್‌ಗೆ ಉತ್ತರ ನೀಡಿದ ಯತ್ನಾಳ್‌

ಬಿಜೆಪಿ ನಾಯಕತ್ವದ ವಿರುದ್ಧ ಬಹಿರಂಗ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್‌ಗೆ ಉತ್ತರ ಕೊಟ್ಟು, ವರಿಷ್ಠರಿಂದ ಸಂಯಮದ ಪಾಠ ಕೇಳಿ ಬಂದಿದ್ದಾರೆ.

ವಕ್ಫ್‌ ಜಂಟಿ ಸಂಸದೀಯ ಸಮಿತಿಗೆ ವರದಿ ಸಲ್ಲಿಸುವ ನೆಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ದೂರು ಹೊತ್ತು ನವದೆಹಲಿಗೆ ತಮ್ಮ ಮಿತ್ರವೃಂದದೊಂದಿಗೆ ತೆರಳಿದ್ದ ಯತ್ನಾಳ್‌, ಬುಧವಾರ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರನ್ನು ಭೇಟಿ ಮಾಡಿ, ತಮಗೆ ಬಂದಿದ್ದ ಶೋಕಾಸ್‌ ನೋಟಿಸ್‌ಗೆ ಆರು ಪುಟಗಳ ಲಿಖಿತ ಉತ್ತರ ನೀಡಿ,  25 ನಿಮಿಷಗಳ ಕಾಲ ರಾಜ್ಯ ನಾಯಕತ್ವದ ಕುರಿತು ಮೌಖಿಕ ವಿವರಣೆಯನ್ನೂ ನೀಡಿದ್ದಾರೆ.

ಶಿಸ್ತು ಸಮಿತಿ ಸಂಯಮ ಪಾಠವೇನು?

ಯತ್ನಾಳ್‌ ಅವರ ಉತ್ತರ ಮತ್ತು ವಿವರಣೆಯನ್ನು ಕೇಳಿದ ಶಿಸ್ತು ಸಮಿತಿ, ಅಂತಿಮವಾಗಿ ಯತ್ನಾಳ್‌ ಅವರಿಗೇ ಶಿಸ್ತಿನ ಪಾಠ ಮಾಡಿ ಕಳಿಸಿದೆ.

ನಾಯಕತ್ವದ ವಿರುದ್ಧ ಏನೇ ದೂರುಗಳಿದ್ದರೂ ವರಿಷ್ಠರ ಗಮನಕ್ಕೆ ತರಬೇಕು. ಅನಗತ್ಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು. ನಿಮಗೆ ಒಳ್ಳೆಯ ಭವಿಷ್ಯವಿದೆ. ಶಾಂತವಾಗಿರಬೇಕು ಎಂದು ಶಿಸ್ತು ಸಮಿತಿ ಯತ್ನಾಳ್‌ಗೆ ಸೂಚಿಸಿದೆ.

ನಿಮ್ಮ ವಕ್ಫ್‌ ಹೋರಾಟ ಉತ್ತಮವಾಗಿದೆ. ಬಣ ರಾಜಕೀಯದ ಬಗ್ಗೆ ಬೀದಿಯಲ್ಲಿ ಮಾತನಾಡಬಾರದು. ನಿಮ್ಮ ದೂರುಗಳು ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯಾಗಬೇಕು ಎಂದು ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯತ್ನಾಳ್ ನೀಡಿದ ಉತ್ತರವೇನು?

ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ರೈತರು, ಮಠಗಳ ಆಸ್ತಿಗಳ ಒತ್ತುವರಿಗೆ ಮುಂದಾಗಿರುವ ವಕ್ಫ್ ವಿರುದ್ಧ ಹೋರಾಟ ಮಾಡಿದ್ದೇನೆ. ಬಿಜೆಪಿ ಪಕ್ಷದ ಅಧ್ಯಕ್ಷರು ವಕ್ಫ್ ಬೋರ್ಡ್ ವಿರುದ್ಧ ಯಾವುದೇ ಹೋರಾಟ ಮಾಡದೇ ಸುಮ್ಮನೆ ಕುಳಿತಿದ್ದಾರೆ. ಹೀಗಾಗಿ ನಾವು ಹೋರಾಟ ಆರಂಭಿಸಬೇಕಾಯಿತು. ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಹೋರಾಟದಲ್ಲಿ ಪಕ್ಷ ಭಾಗಿಯಾಗಬೇಕಿತ್ತು. ಆದರೆ ಹೋರಾಟ ಮಾಡಲಿಲ್ಲ. ನಾವು ಪಾದಯಾತ್ರೆಗೆ ಮುಂದಾದಾಗ ಅದನ್ನು ವ್ಯವಸ್ಥಿತವಾಗಿ ತಡೆಯಲಾಯಿತು. ವಿಜಯೇಂದ್ರ ಅವರಿಂದ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ. ಹೀಗಾಗಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಾಯಿತು ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಬಿಎಸ್ ಯಡಿಯೂರಪ್ಪ ವಿರುದ್ಧ ಹಲವು ಗುರುತರ ಪ್ರಕರಣಗಳಿವೆ. ವಿಜಯೇಂದ್ರ ಅವರು ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು, ನನ್ನ ಕಾರ್ಖಾನೆ ಬಂದ್ ಮಾಡಿಸಿದರು. ಆದರೂ ನಾನು ಜನಪರವಾಗಿ ಹೋರಾಟ ನಡೆಸುತ್ತಿದ್ದೇನೆ. ಹಿಂದುತ್ವವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದೇನೆ. ಇದು ಪಕ್ಷದ ವಿರೋಧಿ ನಿಲುವೆ? ಎಂದು ಶಿಸ್ತು ಸಮಿತಿಗೆ ನೀಡಿರುವ ಉತ್ತರದಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ.

ಒಳ್ಳೆಯ ಭವಿಷ್ಯವಿದೆ ಎಂದಿದ್ದಾರೆ

ಸುಮಾರು 25 ನಿಮಿಷಗಳ ಮೌಖಿಕ ವಿವರಣೆ ಬಳಿಕ ನಗುತ್ತಲೇ ಹೊರಬಂದ ಬಸನಗೌಡ ಪಾಟೀಲ ಯತ್ನಾಳ್‌ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ನನ್ನ ನಗು ನೋಡಿದರೆ ಏನಾದರೂ ಕ್ರಮ ಆಗಿದೆ ಅನಿಸುತ್ತಿದೆಯೇ ಎಂದು ಪ್ರಶ್ನಿಸಿದರು. ನಿಮಗೆ ಒಳ್ಳೆಯ ಭವಿಷ್ಯವಿದೆ. ಶಾಂತವಾಗಿರಿ ಎಂದು ವರಿಷ್ಠರು ಸೂಚಿಸಿದ್ದಾರೆ. ರಾಜ್ಯ ನಾಯಕತ್ವದ ಲೋಪಗಳ ಬಗ್ಗೆ ವಿವರವಾಗಿ ತಿಳಿಸಿದ್ದೇನೆ. ವರಿಷ್ಠರ ಸೂಚನೆಯನ್ನು ಪಾಲಿಸುತ್ತೇನೆ ಎಂದು ಯತ್ನಾಳ್‌ ತಿಳಿಸಿದ್ದಾರೆ.

ಯಡಿಯೂರಪ್ಪ ಹೇಳಿದ್ದೇನು?

ಶಿವಮೊಗ್ಗದಲ್ಲಿ ಬುಧವಾರ ಮಾತನಾಡಿದ್ದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಆಕ್ರೋಶದಲ್ಲಿ ಯತ್ನಾಳ್ ಮಾತನಾಡಿದ್ದಾರೆ. ಇನ್ನು ಮುಂದೆ ಒಂದಾಗಿ ಹೋಗೋಣ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಯಡಿಯೂರಪ್ಪ ಬಣ ಹಾಗೂ ಯತ್ನಾಳ್ ಬಣದ ಸಂಘರ್ಷದಿಂದ ಪಕ್ಷಕ್ಕೆ ಹಾನಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಉಭಯರಿಗೂ ವರಿಷ್ಠರು ಎಚ್ಚರಿಕೆ ನೀಡಿದ ಬಳಿಕ ಕೋಪ ಶಮನವಾಗಿದೆ ಎಂದು ಹೇಳಲಾಗಿದೆ.

Tags:    

Similar News