Pahalgam Terror Attack | ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಯಾದಗಿರಿಯ ಕುಟುಂಬ ಸದಸ್ಯರ ಜೀವ

ಯಾದಗಿರಿಯ ಉದ್ಯಮಿ ಪ್ರಭಾಕರ್‌ ಅವರು ಕುಟುಂಬ ಸಮೇತ ಕಾಶ್ಮೀರದ ಪಹಲ್ಗಾಮ್‌ ಗೆ ಭೇಟಿ ನೀಡಿದ್ದರು. ದಾಳಿ ನಡೆದ ಸ್ಥಳದಿಂದ ನೂರು ಮೀಟರ್‌ ದೂರದಲ್ಲಿದ್ದ ಕುಟುಂಬ ಗುಂಡಿನ ಸದ್ದು ಕೇಳಿ ಅಲ್ಲಿಂದ ಪಾರಾಗಿತ್ತು.;

Update: 2025-04-23 09:06 GMT

ಭಯೋತ್ಪಾದಕ ದಾಳಿ ನಂತರ ಪೆಹಲ್ಗಾಮ್‌ ದೃಶ್ಯ (ಪೋಟೋ ಎಕ್ಸ್‌ ಖಾತೆಯಿಂದ)   

ಕಾಶ್ಮೀರದ ಪಹಲ್ಗಾಮ್‌ಗೆ ಪ್ರವಾಸಕ್ಕೆ ತೆರಳಿದ್ದ ಯಾದಗಿರಿ ಮೂಲದ ಕುಟುಂಬವೊಂದು ಚಾಲಕನ ಸಮಯಪ್ರಜ್ಞೆಯಿಂದಾಗಿ ಉಗ್ರರ ದುಷ್ಕೃತ್ಯದಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ಪಾರಾಗಿದೆ. ಈ ಬಗ್ಗೆ ಕುಟುಂಬದವರಾದ ಉದ್ಯಮಿ ಪ್ರಭಾಕರ್‌ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಉದ್ಯಮಿಯಾಗಿರುವ ಪ್ರಭಾಕರ್‌ ಅವರು ಬೇಸಿಗೆ ರಜೆ ಕಳೆಯಲು ಕುಟುಂಬ ಸಮೇತ ಕಾಶ್ಮೀರದ ಪಹಲ್ಗಾಮ್‌ ಗೆ ಭೇಟಿ ನೀಡಿದ್ದರು. ಕುಟುಂಬದ ಸದಸ್ಯರು ದಾಳಿ ನಡೆದ ಸ್ಥಳದಿಂದ ನೂರು ಮೀಟರ್‌ ಅಂತರದಲ್ಲಿದ್ದರು. ಗುಂಡಿನ ದಾಳಿಯ ಶಬ್ದ ಕೇಳಿ ಭಯಭೀತರಾದ ಕುಟುಂಬದ ಸದಸ್ಯರನ್ನು ಚಾಲಕ ಕೂಡಲೇ ಅಲ್ಲಿಂದ ಏಳು ಕಿ.ಮೀ. ದೂರಕ್ಕೆ ಕರೆದೋಯ್ದಿದ್ದ.  ಸದ್ಯ ಎಲ್ಲರೂ ಸುರಕ್ಷಿತವಾಗಿದ್ದು, ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೇವೆ. ಇಲ್ಲಿಂದ ಶ್ರೀನಗರಕ್ಕೆ ತೆರಳಿ ಬೆಂಗಳೂರಿಗೆ ವಾಪಸಾಗುತ್ತೇವೆ ಎಂದು ಹೇಳಿದ್ದಾರೆ. 

ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗಾಗಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹಾಗೂ ಹಿರಿಯ ಅಧಿಕಾರಿಗಳನ್ನು ಜಮ್ಮುಕಾಶ್ಮೀರಕ್ಕೆ ಕಳಿಸಿದ್ದು ಸಹಾಯವಾಣಿ ಕೂಡ ಆರಂಭಿಸಿದೆ.  ಘಟನೆಯಲ್ಲಿ ಮೂವರು ಪ್ರವಾಸಿಗರು ಮೃತಪಟ್ಟಿದ್ದು, ಮೃತದೇಹ ಹಾಗೂ ಅವರ ಕುಟುಂಬ ಸದಸ್ಯರನ್ನು ಬೆಂಗಳೂರಿಗೆ ಕರೆತರಲು ವಿಶೇಷ ವಿಮಾನ ವ್ಯವಸ್ಥೆಯನ್ನೂ ಮಾಡಿದೆ. 

ಮಂಗಳವಾರ (ಏಪ್ರಿಲ್‌ 22) ನಡೆದ ಭಯೋತ್ಪಾದಕರ ಕೃತ್ಯವನ್ನು ಅಂತರಾಷ್ಟ್ರೀಯ ಸಮುದಾಯ ಖಂಡಿಸಿದ್ದು, ಭಯೋತ್ಪಾದನೆ ನಿರ್ಮೂಲನೆಗೆ ಭಾರತದ ಜೊತೆ ಕೈ ಜೋಡಿಸುವುದಾಗಿ ಭರವಸೆ ನೀಡಿದೆ. 

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯಾ ಗುಟೆರೆಸ್‌ ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಜತೆಗೆ ನಿಲ್ಲುವುದಾಗಿ ಘೋಷಿಸಿವೆ.   

Tags:    

Similar News