ಎಕ್ಸ್‌ಫೆನೊ (xpheno) ಸಂಸ್ಥೆಯ ಸಮೀಕ್ಷೆ ಬಿಡುಗಡೆ | ಕರ್ನಾಟಕ ಪ್ರತಿಭೆಗಳ ರಾಜಧಾನಿ
ಪ್ರತಿಭಾನ್ವಿತ ಉದ್ಯೋಗಿಗಳಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಹರಿಯಾಣ ಮತ್ತು ತೆಲಂಗಾಣ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ ಎಂದು ಎಕ್ಸ್ಫೆನೊ (xpheno) ಸಂಸ್ಥೆ ವರದಿ ಬಿಡುಗಡೆ ಮಾಡಿದೆ.;
ವಿಶ್ವ ದರ್ಜೆಯ ಮೂಲಸೌಕರ್ಯ, ಅತ್ಯುತ್ತಮ ಉದ್ಯೋಗಾವಕಾಶ, ಆಕರ್ಷಕ ವೇತನ ಮತ್ತು ಪ್ರತಿಭೆಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ 'ಪಾಸಿಟಿವ್ ಟ್ಯಾಲೆಂಟ್ ಬ್ಯಾಲೆನ್ಸ್' ವಿಚಾರದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.
ಕಳೆದ ಒಂದು ವರ್ಷದಲ್ಲಿ ಕಾರ್ಪೊರೇಟ್ ವಲಯದಲ್ಲಿ 1,36,500 ಜನರಿಗೆ ಉದ್ಯೋಗಾವಕಾಶ ದೊರೆತಿದೆ. ಈ ಅವಧಿಯಲ್ಲಿ ರಾಜ್ಯದಿಂದ 73 ಸಾವಿರ ಮಂದಿ ಮಾತ್ರ ಬೇರೆ ರಾಜ್ಯಗಳಿಗೆ ಹೋಗಿದ್ದಾರೆ ಎಕ್ಸ್ಫೆನೊ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಪ್ರತಿಭಾನ್ವಿತ ಉದ್ಯೋಗಿಗಳಲ್ಲಿ ಹರಿಯಾಣ ಮತ್ತು ತೆಲಂಗಾಣ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ. ಈ ಸಂಬಂಧ ಎಕ್ಸ್ಫೆನೊ ಸಂಸ್ಥೆ ತಯಾರಿಸಿದ ಒಂದು ವರ್ಷದ ಸಮೀಕ್ಷಾ ವರದಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಂಗಳವಾರ ಬಿಡುಗಡೆ ಮಾಡಿದರು.
ರಾಜ್ಯದ ವಿವಿಧ ವಲಯಗಳಲ್ಲಿ 59.7 ಲಕ್ಷ ಮಂದಿ ವೈಟ್ ಕಾಲರ್ ಹುದ್ದೆಗಳಲ್ಲಿ ಇದ್ದಾರೆ. ಇವರಲ್ಲಿ ಶೇ.64ರಷ್ಟು ಜನರಿಗೆ ಕನಿಷ್ಠ ಒಂದು ವರ್ಷದ ವೃತ್ತಿ ಅನುಭವವಾದರೂ ಇದೆ. ಈ ಪೈಕಿ 34 ಲಕ್ಷ ಮಂದಿ ಬೆಂಗಳೂರಿನಲ್ಲೇ ಇರುವುದು ಹೆಗ್ಗಳಿಕೆ.
ಐಟಿ, ಎಐ ಮತ್ತು ಜೀವವಿಜ್ಞಾನ ಕ್ಷೇತ್ರಗಳಲ್ಲಿ ಪ್ರತಿಭಾವಂತರನ್ನು ಪರಿಗಣಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ನಗರ ಬಹುರಾಷ್ಟ್ರೀಯ ಕಂಪನಿಗಳ 'ಜಾಗತಿಕ ಸಾಮರ್ಥ್ಯ ಕೇಂದ್ರ'ಗಳ (ಜಿಸಿಸಿ) ತಾಣವಾಗಿಯೂ ಮುಂಚೂಣಿಗೆ ಬರುತ್ತಿದೆ. ದೇಶದಾದ್ಯಂತ ಒಟ್ಟು 32 ಲಕ್ಷ ಮಂದಿ ಅರ್ಹರು ಬೆಂಗಳೂರೇ ತಮ್ಮ ವೃತ್ತಿ ಜೀವನದ ಮೊದಲ ಆಯ್ಕೆ ಎಂದು ತಿಳಿಸಿರುವುದು ವರದಿಯಲ್ಲಿ ದೃಢಪಟ್ಟಿದೆ.