Work Hour Extension | ಕಾರ್ಮಿಕರು ಒಪ್ಪಿದರಷ್ಟೇ 10 ಗಂಟೆ ಕೆಲಸದ ಅವಧಿ ಜಾರಿ - ಸಚಿವ ಸಂತೋಷ್‌ ಲಾಡ್‌ ಸ್ಪಷ್ಟನೆ

ಕಾರ್ಖಾನೆಗಳ ಮಾಲೀಕರು 10ಗಂಟೆ ಕೆಲಸದ ಅವಧಿಯ ಪರವಾಗಿದ್ದಾರೆ. ಅಂತಿಮವಾಗಿ ಕಾರ್ಮಿಕರು ಒಪ್ಪಿಗೆ ನೀಡಿದರಷ್ಟೇ ನಿಯಮ ಜಾರಿ ಮಾಡಲಾಗುವುದು ಎಂದು ಸಚಿವ ಸಂತೋಷ್‌ ಹೇಳಿದರು.;

Update: 2025-07-31 08:08 GMT

ಖಾಸಗಿ ಕಂಪೆನಿಗಳಲ್ಲಿ ಕಾರ್ಮಿಕರು ಒಪ್ಪಿಗೆ ನೀಡಿದರಷ್ಟೇ 10 ಗಂಟೆಗಳ ಕೆಲಸ ಅವಧಿ ಜಾರಿ ಮಾಡುತ್ತೇವೆ. ಕೆಲಸದ ಅವಧಿ ಹೆಚ್ಚಳವು ಕೇಂದ್ರ ಸರ್ಕಾರದ ನೀತಿಯಾದರೂ ಕಾರ್ಮಿಕರ ಒಪ್ಪಿಗೆ ಸಿಗದಿದ್ದರೆ ಜಾರಿ ಮಾಡುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಕ್ಕೆ 10 ಗಂಟೆಗಳ ಕೆಲಸ ಅವಧಿ ಜಾರಿ ಮಾಡುವ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆದರೆ, ಕಾರ್ಖಾನೆಗಳ ಮಾಲೀಕರು 10ಗಂಟೆ ಕೆಲಸದ ಅವಧಿಯ ಪರವಾಗಿದ್ದಾರೆ. ಅಂತಿಮವಾಗಿ ಕಾರ್ಮಿಕರು ಒಪ್ಪಿಗೆ ನೀಡಿದರಷ್ಟೇ ನಿಯಮ ಜಾರಿ ಮಾಡಲಾಗುವುದು ಎಂದು ಹೇಳಿದರು.

ಕೆಲಸದ ಅವಧಿ ಹೆಚ್ಚಿಸುವ ನಿರ್ಧಾರ ಕೇಂದ್ರ ಸರ್ಕಾರದ ನೀತಿಯಾಗಿದೆ. 9ರಿಂದ 10ಗಂಟೆ ಕೆಲಸ ಮಾಡಬೇಕು ಎಂಬ ನಿಯಮವಿದೆ. ರಾಜ್ಯದಲ್ಲಿ ಈ ನಿಯಮ ಜಾರಿಗೊಳಿಸುವ ಸಂಬಂಧ ಸಭೆ ನಡೆಸಲಾಗಿತ್ತು. ಆದರೆ, ಕಾರ್ಮಿಕರು ವಿರೋಧ ವ್ಯಕ್ತಪಡಿಸಿದರು. ಹಾಗಾಗಿ ಕಾರ್ಮಿಕರ ಇಂಗಿತ ಆಧರಿಸಿ ನಿಯಮ ಜಾರಿಗೊಳಿಸಲಾಗುವುದು ಎಂದರು.

ಅನುಕೂಲಕರ ಸಮಯ( ಫ್ಲೆಕ್ಸಿ ಅವರ್ಸ್) ಬೇಕು ಎನ್ನುವವರಿಗೆ ಒಂದಷ್ಟು ನಿಯಮಗಳನ್ನು ಹಾಕಲಾಗುವುದು. ಯಾವ ಕಡೆ ಕಾರ್ಮಿಕ ಸಂಘಟನೆಗಳು ಒಪ್ಪಲಿವೆಯೋ ಅಂತಹ ಕಡೆ 10 ಗಂಟೆಗಳ ಕೆಲಸದ ಅವಧಿಯ ವ್ಯವಸ್ಥೆ ಜಾರಿಯಾಗಲಿದೆ. ಅದರಲ್ಲೂ ಕಾರ್ಮಿಕರು ಒಪ್ಪಿದರೆ ಮಾತ್ರ ಜಾರಿ ಆಗಲಿದೆ ಎಂದು ಹೇಳಿದರು.

ಕೆಲಸದ ಅವಧಿಗೆ ನನ್ನ ಸಹಮತವಿಲ್ಲ

ಕೆಲಸದ ಅವಧಿ ಹೆಚ್ಚಳ ನಿರ್ಧಾರ ಕೇಂದ್ರ ಸರ್ಕಾರದ ನೀತಿ, ಇದು ರಾಜ್ಯ ಸರ್ಕಾರದ ಕ್ರಮವಲ್ಲ. ಇದರ ಬಗ್ಗೆ ಸಂಪುಟದಲ್ಲೂ ಚರ್ಚೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಕೆಲಸದ ಅವಧಿ ಹೆಚ್ಚಳವನ್ನು ಬಲವಂತವಾಗಿ ಜಾರಿ ಮಾಡುವುದಿಲ್ಲ. ಒಂದು ವೇಲೆ ಕಾರ್ಮಿಕರು ಒಪ್ಪಿದರೆ ನಾವು ಏನೂ ಮಾಡಲು ಆಗುವುದಿಲ್ಲ. ವೈಯಕ್ತಿಕವಾಗಿ ಕಾರ್ಮಿಕ ಸಚಿವನಾಗಿ 9 ರಿಂದ 10 ಗಂಟೆಗಳ ಕಡ್ಡಾಯ ಕೆಲಸದ ಅವಧಿಯನ್ನು ಒಪ್ಪುವುದಿಲ್ಲ. ಆದರೆ ಕೇಂದ್ರದ ನೀತಿಯನ್ನು ತಿರಸ್ಕಾರ ಮಾಡಲೂ ಆಗುವುದಿಲ್ಲ ಎಂದು ಸಂತೋಷ್ ಲಾಡ್ ಹೇಳಿದರು.

ಅಭಿಪ್ರಾಯ ಆಲಿಸಿ ನಿರ್ಧಾರ

10 ಗಂಟೆ ಕೆಲಸ ಮಾಡುವ ಕಂಪನಿಗೆ ನಮ್ಮ ಅಧಿಕಾರಿಗಳು ಹೋಗಿ, ಕಾರ್ಮಿಕರ ಅಭಿಪ್ರಾಯ ಪಡೆದು ಅನುಮೋದನೆ ನೀಡಲಿದ್ದಾರೆ. ಕಾರ್ಮಿಕರು ತಮ್ಮ ಒಪ್ಪಿಗೆ ದಾಖಲಿಸಲು ಸರ್ಕಾರ ಯಾವುದೇ ಪೋರ್ಟಲ್ ಮಾಡುವುದಿಲ್ಲ ಎಂದು ಹೇಳಿದರು.

ಟಿಸಿಎಸ್ ಕಂಪನಿಯಲ್ಲಿ ನೌಕರರನ್ನು ತೆಗೆದು ಹಾಕಿರುವ ಮಾಹಿತಿ ಇದೆ. ಯಾವುದೇ ಕಂಪನಿ ಉದ್ಯೋಗಿಗಳನ್ನು ತೆಗೆದು ಹಾಕುವಾಗ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು. ಆದರೆ, ಟಿಸಿಎಸ್ ಕಂಪೆನಿ ಮಾಹಿತಿ ನೀಡಿಲ್ಲ. ಈ ಬಗ್ಗೆ ಮಾಹಿತಿ ಕೇಳಿದ್ದೇವೆ ಎಂದು ಸಂತೋಷ್ ಲಾಡ್ ಹೇಳಿದರು.

Tags:    

Similar News