ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಅದ್ದೂರಿ ಸ್ವಾಗತ

ಜೈಲಿನಿಂದ ಹೊರಬಂದ ಆರೋಪಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Update: 2024-04-23 13:23 GMT
ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಅದ್ದೂರಿ ಸ್ವಾಗತ
Click the Play button to listen to article

ಬೆಳಗಾವಿ: ಬೆಳಗಾವಿಯ ಹೊಸ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆಗೈದಿದ್ದ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜೈಲಿನಿಂದ ಹೊರಬಂದ ಆರೋಪಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಹೊರ ಬಂದ ಆರೋಪಿ ಬಸಪ್ಪ ನಾಯ್ಕ್‌ಗೆ ಹೂಹಾರವನ್ನು ಹಾಕಿ, ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ. ಆರೋಪಿಗೆ ಹೂಹಾರ ಹಾಕಿ ವಿವಿಧ ಹಾಡುಗಳನ್ನು ಹಾಕಿ ಎಡಿಟ್‌ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪಟಾಕಿ ಹಾಗೂ ಸಿಹಿ ಹಂಚಿ ಆರೋಪಿಗಳ ಬಿಡುಗಡೆಯನ್ನು ಸಂಭ್ರಮಿಸಲಾಗಿದೆ.

ಏನಿದು ಘಟನೆ?

ವಂಟಮುರಿ ಗ್ರಾಮದ ದುಂಡಪ್ಪ ಅಶೋಕ ನಾಯಕ್ ಹಾಗೂ ಅದೇ ಗ್ರಾಮದ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಪೋಷಕರ ವಿರೋಧ ವ್ಯಕ್ತವಾಗಿತ್ತು. ಯುವತಿಯ ನಿಶ್ಚಿತಾರ್ಥ ನಿಗದಿಯಾಗಿತ್ತು ಅಲ್ಲದೇ ಮದುವೆ ದಿನಾಂಕ ನಿಗದಿ ಮಾಡಲು ಯುವತಿಯ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಮನೆಯಲ್ಲಿ ಮದುವೆ ಸಂಭ್ರಮಕ್ಕೆ ಸಿದ್ಧತೆಯಾಗುತ್ತಿದ್ದರೆ ಇತ್ತ ಯುವತಿ ಪ್ರೀತಿಸಿದ ಯುವಕ ದುಂಡಪ್ಪ ಜೊತೆ ರಾತ್ರೋರಾತ್ರಿ ಮನೆ ಬಿಟ್ಟು ಊರಿಂದ ಪರಾರಿಯಾಗಿದ್ದಳು.

ಮಗಳು ಮನೆ ಬಿಟ್ಟು ಹೋಗಿರುವ ಕಾರಣ ರೊಚ್ಚಿಗೆದ್ದ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನೆಡಸಿದ ಘಟನೆ 2023ರ ಡಿಸೆಂಬರ್ ನಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ 13 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಇದೀಗ ಹೈಕೋರ್ಟ್ ಈ ಎಲ್ಲ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಆರೋಪಿಗಳು ಸೋಮವಾರ (ಏ.22) ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Tags:    

Similar News