ಪ್ರವಾಸಕ್ಕೆ ಕಾರು ಬುಕ್ ಮಾಡಿ, ಚಾಲಕನ ಮೊಬೈಲ್ ಮತ್ತು ಕಾರಿನೊಂದಿಗೆ ಮಹಿಳೆ ಪರಾರಿ!

ಕಾರಿನ ಚಾಲಕ ಅನಂತ್‌ಕುಮಾರ್ ಅವರು ಸುಮಾರು 15 ದಿನಗಳ ಹಿಂದೆ ಬಾಡಿಗೆಗೆ ಕಾರವಾರಕ್ಕೆ ತೆರಳಿದ್ದಾಗ ಈ ಮಹಿಳೆಯ ಪರಿಚಯವಾಗಿತ್ತು. ಆ ಸಂದರ್ಭದಲ್ಲಿ, ಆಕೆ ಬೆಂಗಳೂರು ಮತ್ತು ಮೈಸೂರು ಸುತ್ತಾಡಲು ಕಾರು ಬಾಡಿಗೆಗೆ ಬೇಕೆಂದು ಚಾಲಕನ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಳು.;

Update: 2025-05-14 06:22 GMT

ಸಾಂದರ್ಭಿಕ ಚಿತ್ರ

ಪ್ರವಾಸಕ್ಕೆಂದು ಕಾರು ಬಾಡಿಗೆಗೆ ಪಡೆದ ಮಹಿಳೆಯೊಬ್ಬರು, ಚಾಲಕ ಶೌಚಾಲಯಕ್ಕೆ ತೆರಳಿದ್ದ ವೇಳೆ ಆತನ ಮೊಬೈಲ್ ಫೋನ್ ಹಾಗೂ ಕಾರಿನ ಸಮೇತ ಪರಾರಿಯಾಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನ ಚಾಲಕ ಅನಂತ್‌ಕುಮಾರ್ ಅವರು ಸುಮಾರು 15 ದಿನಗಳ ಹಿಂದೆ ಬಾಡಿಗೆಗೆ ಕಾರವಾರಕ್ಕೆ ತೆರಳಿದ್ದಾಗ ಈ ಮಹಿಳೆಯ ಪರಿಚಯವಾಗಿತ್ತು. ಆ ಸಂದರ್ಭದಲ್ಲಿ, ಆಕೆ ಬೆಂಗಳೂರು ಮತ್ತು ಮೈಸೂರು ಸುತ್ತಾಡಲು ಕಾರು ಬಾಡಿಗೆಗೆ ಬೇಕೆಂದು ಚಾಲಕನ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಳು.

ಮೇ 6ರಂದು ಆ ಮಹಿಳೆ ಅನಂತ್‌ಕುಮಾರ್‌ಗೆ ಕರೆ ಮಾಡಿ ಬೆಂಗಳೂರಿಗೆ ಬರುವುದಾಗಿ ತಿಳಿಸಿದಳು. ಅಲ್ಲದೆ, ತಾನು ರಿಫ್ರೆಶ್​ ಆಗಲು ಒಂದು ರೂಮ್ ಬುಕ್ ಮಾಡುವಂತೆ ಚಾಲಕನಿಗೆ ಹೇಳಿದ್ದಳು. ಮಹಿಳೆಯ ಮಾತಿನಂತೆ, ನಗರದ ಸಿಡೆದಹಳ್ಳಿ ಬಳಿಯ ಪಿ.ವಿ. ರೆಸಿಡೆನ್ಸಿಯಲ್ಲಿ ರೂಮ್ ಬುಕ್ ಮಾಡಲಾಗಿತ್ತು.

ಅನಂತ್‌ಕುಮಾರ್ ರೂಮ್‌ಗೆ ಬಂದ ನಂತರ, ಆ ಮಹಿಳೆ ತಾನು ಬ್ಯೂಟಿಪಾರ್ಲರ್‌ಗೆ ಹೋಗಿ ಬರುವುದಾಗಿ ತಿಳಿಸಿ, ಅನಂತ್‌ಕುಮಾರ್ ಅವರನ್ನು ರೆಡಿಯಾಗಿರುವಂತೆ ಹೇಳಿದ್ದಳು. ಆಕೆಯ ಮಾತನ್ನು ನಂಬಿದ ಚಾಲಕ ತನ್ನ ಮೊಬೈಲ್ ಫೋನ್ ಮತ್ತು ಕಾರಿನ ಕೀಯನ್ನು ಟೇಬಲ್ ಮೇಲೆ ಇಟ್ಟು ಶೌಚಾಲಯಕ್ಕೆ ಹೋಗಿದ್ದರು. ಆ ಸಮಯವನ್ನು ಬಳಸಿಕೊಂಡ ಮಹಿಳೆ, ಚಾಲಕನ ಮೊಬೈಲ್ ಹಾಗೂ ಕಾರಿನ ಕೀ ತೆಗೆದುಕೊಂಡು ರೂಮಿನ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದಾಳೆ.

ಶೌಚಾಲಯದಿಂದ ಹಿಂತಿರುಗಿದ ಅನಂತ್‌ಕುಮಾರ್ ಗಾಬರಿಯಿಂದ ಕಿಟಕಿಯ ಮೂಲಕ ಕೂಗಿಕೊಂಡಾಗ, ಬೇರೆಯವರು ಬಂದು ಬಾಗಿಲಿನ ಚಿಲಕ ತೆರೆದರು. ಆಗ ತಾನು ಮೋಸ ಹೋಗಿರುವುದು ಚಾಲಕನಿಗೆ ಅರಿವಾಯಿತು. ಈ ವಂಚನೆಗೆ ಸಂಬಂಧಿಸಿದಂತೆ ಚಾಲಕ ಅನಂತ್‌ಕುಮಾರ್ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Tags:    

Similar News