ಬಿಜೆಪಿ ಪಾದಯಾತ್ರೆಯನ್ನು ರಾಜಕೀಯವಾಗಿ ಎದುರಿಸುತ್ತೇವೆ: ಸಿಎಂ ಸಿದ್ದರಾಮಯ್ಯ
ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ, ನಾವೂ ಕೂಡ ರಾಜಕೀಯವಾಗಿ ಅದನ್ನು ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಆರ್‌ಎಸ್‌ಗೆ ಬಾಗಿನ ಅರ್ಪಣೆ ಮಾಡಿದ ಬಳಿಕ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿರುವ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ʻʻಅವರು ಪಾದಯಾತ್ರೆ ಮಾಡುವುದಾದರೆ ಮಾಡಲಿ. ನಾವೂ ಕೂಡ ರಾಜಕೀಯವಾಗಿ ಎದುರಿಸುತ್ತೇವೆ. ವಾಲ್ಮೀಕಿ ಹಗರಣದಲ್ಲಿ 84.63 ಕೋಟಿ ಹಗರಣವಾಗಿದೆ ಎನ್ನುವುದು ನಿಜ. ಎಸ್.ಐ.ಟಿ ರಚನೆಯಾಗಿದ್ದು ತನಿಖೆಯಾಗುತ್ತಿದೆ. ಅವರೂ ಕೂಡ ಸಿಬಿಐ, ಇಡಿ ತನಿಖೆ ಮಾಡಿಸುತ್ತಿದ್ದಾರೆʼʼ ಎಂದು ಹೇಳಿದರು.
"ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಅದಕ್ಕಾಗಿಯೇ 21 ಹಗರಣಗಳನ್ನು ಪಟ್ಟಿ ಮಾಡಿ ಹೇಳಿದ್ದೇನೆ. ಕೆಲವು ತನಿಖೆಗಳು ನಡೆಯುತ್ತಿವೆ. ರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಇಂದಿನವರೆಗೂ ಸಿಬಿಐ ತನಿಖೆ ಪೂರ್ಣಗೊಳಿಸಿಲ್ಲ.ಅವರ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. ಆದರೆ ನಾವು 7-8 ಹಗರಣಗಳನ್ನು ಸಿಬಿಐ ಗೆ ವಹಿಸಿದ್ದೇವೆ. ಇದೆ ಬಿಜೆಪಿ ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದಾಗ ಸಿಬಿಐ ಯನ್ನು ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಈಗ ಸಿಬಿಐ ಮೇಲೆ ಇವರಿಗೇನು ಪ್ರೀತಿ" ಎಂದು ವಾಗ್ದಾಳಿ ನಡೆಸಿದರು.
ಮೂಡಾ ಪ್ರಕರಣದಲ್ಲಿ ನಿವೇಶನಗಳನ್ನು ಸಿಎಂ ಹಿಂದಿರುಗಿಸಿ ತನಿಖೆಗೆ ಅವಕಾಶ ಕೊಡಬೇಕೆಂದು ಬಿಜೆಪಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ʻʻಮೂಡಾ ಪ್ರಕರಣದಲ್ಲಿ ನನ್ನ ಮೇಲೆ ಯಾವ ಕಪ್ಪು ಮಸಿಯೂ ಇಲ್ಲ. ಈ ಬಗ್ಗೆ ನ್ಯಾಯಾಂಗ ಆಯೋಗ ರಚನೆಯಾಗಿದೆ. ಬಿಜೆಪಿ ಯಾವತ್ತಾದರೂ ನ್ಯಾಯಾಂಗ ತನಿಖೆಗೆ ನೀಡಿತ್ತೇ?" ಎಂದು ಪ್ರಶ್ನಿಸಿದರು. "ಕೋವಿಡ್ ಸಂದರ್ಭದಲ್ಲಿ 3 ರಿಂದ 4 ಸಾವಿರ ಕೋಟಿ ರೂಪಾಯಿ ನುಂಗಿ ಹಾಕಿದ್ದಾರೆ. ನ್ಯಾಯಾಂಗ ತನಿಖೆ ಅಥವಾ ಸಿಬಿಐ ಗೆ ವಹಿಸಲು ಕೊಡಿ ಎಂಡು ಒತ್ತಾಯಿಸಿದೆ. ಆದರೆ ಅವರು ಕೊಡಲಿಲ್ಲʼʼ ಎಂದರು.
"ಮುಡಾ ಬಗ್ಗೆ ಬಹಳ ಮಾತನಾಡುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು 1984 ರಲ್ಲಿ ಕೈಗಾರಿಕಾ ನಿವೇಶನವನ್ನು ಪಡೆದರು. ಸ್ವಾದೀನಕ್ಕೆ ಕೂಡ ಪಡೆದಿದ್ದಾರೆ. ನಂತರ ಬದಲಿ ನಿವೇಶನಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. ಕೈಗಾರಿಕೆ ಮಾಡಿದ್ದಾರೆಯೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. "ಸಿ ಐ ಟಿಬಿಯಲ್ಲಿ ಪುಟ್ಟಯ್ಯ ಇರುವಾಗ ಎಷ್ಟು ನಿವೇಶನಗಳು ದೇವೇಗೌಡರ ಕುಟುಂಬಕ್ಕೆ ಹೋಗಿವೆ? ಎಂಬುದಕ್ಕೆ ಲೆಕ್ಕ ಇದೆಯೇ? ಎಂದು ಅವರು ಕೇಳಿದರು.