ಕರ್ನಾಟಕದಲ್ಲಿ ವನ್ಯಜೀವಿಗಳ ಸಾವು: ಹುಲಿಗಳ ಹತ್ಯೆಗೆ 'ಕಾರ್ಬೋಫ್ಯುರಾನ್' ವಿಷ ಬಳಕೆ
ಕಿಡಿಗೇಡಿಗಳು ಪ್ರತೀಕಾರಕ್ಕಾಗಿ ಜಾನುವಾರುಗಳ ಕಳೇಬರದ ಮೇಲೆ ವಾಸನೆ ರಹಿತವಾದ ಕಾರ್ಬೋಫ್ಯುರಾನ್ ವಿಷ ಸಿಂಪಡಿಸಿದ್ದರು. ಈ ವಿಷ ಸೇವಿಸಿ ಹುಲಿಗಳು ಮೃತಪಟ್ಟಿರುವುದು ದೃಢಪಟ್ಟಿದೆ.;
ಸಾಂದರ್ಭಿಕ ಚಿತ್ರ
ಕರ್ನಾಟಕದಲ್ಲಿ ವನ್ಯಜೀವಿಗಳ ಅಸಹಜ ಸಾವುಗಳು ಆತಂಕ ಮೂಡಿಸಿವೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಶಂಕಾಸ್ಪದವಾಗಿ ಮೃತಪಟ್ಟಿದ್ದ ಐದು ಹುಲಿಗಳ ದೇಹದಲ್ಲಿ ಮಾರಕ ಕೀಟನಾಶಕ 'ಕಾರ್ಬೋಫ್ಯುರಾನ್' ಪತ್ತೆಯಾಗಿದೆ ಎಂದು ಉನ್ನತ ಮಟ್ಟದ ತನಿಖಾ ಸಮಿತಿ ಸದಸ್ಯ, ಸಿಸಿಎಫ್ ಟಿ.ಹೀರಾಲಾಲ್ ತಿಳಿಸಿದ್ದಾರೆ. ಇದೇ ವೇಳೆ, ಹಾಸನ ಜಿಲ್ಲೆಯಲ್ಲಿ ಎರಡು ಚಿರತೆಗಳ ಕಳೇಬರ ಪತ್ತೆಯಾಗಿದ್ದು, ಅವುಗಳ ಸಾವಿನ ಸುತ್ತಲೂ ಅನುಮಾನದ ಛಾಯೆ ಮೂಡಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದ ಹುಲಿಗಳ ಸಾವಿನ ಹಿಂದಿನ ರಹಸ್ಯ ಈಗ ಬಯಲಾಗಿದೆ. ಮೃತಪಟ್ಟಿದ್ದ ಐದು ಹುಲಿಗಳ ಅಂಗಾಂಗಗಳ ಮಾದರಿಗಳನ್ನು ಎಫ್‌ಎಸ್‌ಎಲ್ (ವಿಧಿವಿಜ್ಞಾನ ಪ್ರಯೋಗಾಲಯ) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪರೀಕ್ಷೆಗಳಲ್ಲಿ 'ಕಾರ್ಬೋಫ್ಯುರಾನ್' ಎಂಬ ವಿಷಕಾರಿ ಕೀಟನಾಶಕದ ಅಂಶ ಪತ್ತೆಯಾಗಿದೆ ಎಂದು ಟಿ.ಹೀರಾಲಾಲ್ ಮಾಹಿತಿ ನೀಡಿದ್ದಾರೆ.
ಈ ಸಾವಿನ ಹಿಂದಿನ ಉದ್ದೇಶದ ಬಗ್ಗೆ ಬೆಳಕು ಚೆಲ್ಲಿದ ಹೀರಾಲಾಲ್, "ಕಿಡಿಗೇಡಿಗಳು ಪ್ರತೀಕಾರಕ್ಕಾಗಿ ಜಾನುವಾರುಗಳ ಕಳೇಬರದ ಮೇಲೆ ವಾಸನೆ ರಹಿತವಾದ ಕಾರ್ಬೋಫ್ಯುರಾನ್ ವಿಷ ಸಿಂಪಡಿಸಿದ್ದರು. ಈ ವಿಷ ಸೇವಿಸಿ ಹುಲಿಗಳು ಮೃತಪಟ್ಟಿರುವುದು ದೃಢಪಟ್ಟಿದೆ" ಎಂದು ತಿಳಿಸಿದ್ದಾರೆ. ತನಿಖಾ ಸಮಿತಿಯು ಈ ಬಗ್ಗೆ ಶೀಘ್ರದಲ್ಲೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ. ಈ ಘಟನೆ ಮಾನವ-ವನ್ಯಜೀವಿ ಸಂಘರ್ಷದ ಗಂಭೀರ ಪರಿಣಾಮ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.