ನನ್ನನ್ನು ಪಕ್ಷದಿಂದ ಇನ್ನೂ ಯಾಕೆ ಉಚ್ಚಾಟಿಸಿಲ್ಲ: ಕೆ.ಎಸ್.ಈಶ್ವರಪ್ಪ ಪ್ರಶ್ನೆ
ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರಷ್ಟೇ ಇನ್ನಷ್ಟು ಕಟುವಾಗಿ ಮಾತಾಡಲು ಸಾಧ್ಯ ಎಂದು ಈಶ್ವರಪ್ಪ ಹೇಳಿದ್ದಾರೆ.;
ಶಿವಮೊಗ್ಗ: ʼʼನನ್ನನ್ನು ಪಕ್ಷದಿಂದ ಇನ್ನೂ ಯಾಕೆ ಉಚ್ಚಾಟಿಸಿಲ್ಲʼʼ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ʼʼನನ್ನನ್ನು ಪಕ್ಷದಿಂದ ಉಚ್ಚಾಟಿಸಿದರಷ್ಟೇ ಇನ್ನಷ್ಟು ಕಟುವಾಗಿ ಮಾತಾಡಲು ಸಾಧ್ಯ. ಪ್ರಚಾರದ ಸಂದರ್ಭ ನಾನು ನರೇಂದ್ರ ಮೋದಿ ಪೋಟೋ ಬಳಸಬಾರದು ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ, ಮೋದಿ ಫೋಟೋ ಬಿಟ್ಟು ಯಡಿಯೂರಪ್ಪ, ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಫೋಟೊ ಇಟ್ಟುಕೊಂಡು ಹೋಗಿ ಅವರು ಚುನಾವಣೆ ಗೆದ್ದು ತೋರಿಸಲಿ ನೋಡೋಣ' ಎಂದು ಸವಾಲೆಸೆದದರು.
'ಮೋದಿ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ತಾಕತ್ತಿದ್ದರೆ ಯಡಿಯೂರಪ್ಪ ಕುಟುಂಬದವರು ನರೇಂದ್ರ ಮೋದಿ ಫೋಟೊ ಬಿಟ್ಟು ಪ್ರಚಾರ ಮಾಡಿ ಗೆಲ್ಲಲಿ' ಎಂದರು.
'ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಬೆಂಬಲಿಗರಲ್ಲಿ ಗೊಂದಲ ಮೂಡಿಸುತ್ತಿದೆ. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ಒತ್ತಿ ಹೇಳಿದರು.