ಬಿಜೆಪಿ ಅವಧಿಯಲ್ಲಿ ಪ್ರವಾಹ ಬಂದಾಗ ನಿವೆಲ್ಲಾ ಎಲ್ಲಿ ಹೋಗಿದ್ರಿ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದಲೇ ಜನರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಈಗ ಅತೀವೃಷ್ಟಿಯಾಗಿದ್ದು ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲಬುರಗಿಗೆ ಮಂತ್ರಿಸ್ಥಾನ ನೀಡಿರಲಿಲ್ಲ. ಪ್ರವಾಹ ಬಂದಾಗ ಇವರೆಲ್ಲಾ ಎಲ್ಲಿದ್ದರು ಎಂದು ಗೊತ್ತಿದೆ. ವಿರೋಧ ಪಕ್ಷಗಳು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದಲೇ ಜನರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಅತೀವೃಷ್ಟಿಯಾಗಿದ್ದು ಬೆಳೆಹಾನಿ ಸಂಭವಿಸಿದೆ. ನಿಖರ ಅಂಕಿ-ಅಂಶಗಳ ಸಂಗ್ರಹಿಸುತ್ತಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಬಿಜೆಪಿ ಸಂಸದರು ಅನುದಾನಕ್ಕಾಗಿ ಕೇಂದ್ರವನ್ನು ಒತ್ತಾಯಿಸಲಿ
ಈ ಹಿಂದೆ ಸಿಎಂ ಯಡಿಯೂರಪ್ಪನವರನ್ನು ಬೆಳೆ ಪರಿಹಾರ ನೀಡುವಂತೆ ಕೇಳಿದಾಗ, ನೋಟು ತಯಾರಿಸುವ ಯಂತ್ರವಿಲ್ಲ ಎಂದು ಹೇಳಿದ್ದರು. ಅನುದಾನ ನೀಡುವಂತೆ ಹಲವು ಬಾರಿ ಕೇಂದ್ರಕ್ಕೆ ಪತ್ರ ಬರೆದರೂ ಸ್ಪಂದಿಸಿರಲಿಲ್ಲ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋದ ನಂತರ ಕೇಂದ್ರ ಹಣ ಬಿಡುಗಡೆ ಮಾಡಿತ್ತು. ಕೇಂದ್ರ ಸರ್ಕಾರ ಯಾವುದೇ ಉಪಕಾರ ಮಾಡುತ್ತಿಲ್ಲ. ನಮ್ಮ ಕನ್ನಡಿಗರ ಬೆವರಿನ ಪಾಲನ್ನು ನೀಡುವಂತೆ ಕೇಳುತ್ತಿದ್ದೇವೆ. ಬಿಜೆಪಿ ಸಂಸದರು ಹಾಗೂ ಸಚಿವರು ಕೇಂದ್ರ ಸರ್ಕಾರದ ಬಳಿ ಈ ಕುರಿತು ಪ್ರಶ್ನಿಸಬೇಕು ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳಿಗೆ ದತ್ತಾಂಶ ಅಗತ್ಯ
ಎಲ್ಲಾ ಪ್ರಶ್ನೆಗಳಿಗೂ ಲೋಕಸಭಾ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ, ಸೊನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಬೇಕು ಎಂದಾದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೊದಿ ಹಾಗೂ ಅಮಿತ್ ಶಾ ಅಧಿಕಾರದಲ್ಲಿರುವುದು ಏಕೆ ? ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತೇನೆ ಎಂದರೆ ಎಲ್ಲರೂ ಸ್ವಾಗತಿಸುತ್ತಾರೆ. ಆದರೆ ರಾಜ್ಯ ಸರ್ಕಾರ ವಿವಿಧ ಜಾತಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿ ದತ್ತಾಂಶ ಸಂಗ್ರಹ ಮಾಡಿದರೆ ತಪ್ಪೇನು ? ಸರ್ಕಾರ ಯೋಜನೆಗಳನ್ನು ರೂಪಿಸಲು ದತ್ತಾಂಶಗಳು ಸಹಾಯವಾಗುತ್ತವೆ. ಕೆಲವು ಯೋಜನೆಗಳನ್ನು ಘೋಷಿಸಿದರೆ ಅದರ ಬಗ್ಗೆ ಪ್ರಶ್ನಿಸುವ ಬಿಜೆಪಿ ನಾಯಕರಿಗೆ ಸಾಮಾನ್ಯ ಜ್ಞಾನ ಇದೆಯೇ ಎಂದರು.
ಸಮೀಕ್ಷೆ ನಡೆಸಲು ರಾಜ್ಯಕ್ಕೆ ಅಧಿಕಾರವಿದೆ
ಬಿಜೆಪಿ ಸರ್ಕಾರಕ್ಕೆ ಕಳೆದ ಹತ್ತು ವರ್ಷದಿಂದ ಜಾತಿ ಗಣತಿ ಮಾಡಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಗಣತಿ ಮಾಡಿದರೆ ಪ್ರಧಾನಿ ನರೇಂದ್ರ ಮೋದಿಯವರ ಬಂಡವಾಳ ಬಯಲಾಗುತ್ತದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆ ಮಾಡಲು ಸಂವಿಧಾನಬದ್ಧ ಅಧಿಕಾರವಿದೆ ಎಂದು ರಾಜ್ಯ ಸರ್ಕಾರದ ಸಮೀಕ್ಷೆಯನ್ನು ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ದತ್ತಾಂಶ ಮಾರಾಟವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ. ಜವಬ್ದಾರಿ ಸ್ಥಾನದಲ್ಲಿದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಿದಾಗಲೂ ಅದರ ದತ್ತಾಂಶ ಮಾರಾಟವಾಗಲಿದೆಯೇ? ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿರುವವರೆಲ್ಲರೂ ಉನ್ನತ ವರ್ಗದವರೇ ಆಗಿದ್ದಾರೆ. ಹಿಂದುಳಿದ ವರ್ಗಗಳ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದರು.