ಮುಂದಿನ ಚುನಾವಣೆಯಲ್ಲಿ ರಾಮನಗರದ ನಾಲ್ಕೂ ಕ್ಷೇತ್ರ ನಮ್ಮದೇ; ಎಚ್‌ಡಿಕೆ ಶಪಥ
ಹತ್ತು ಜನ್ಮ ಎತ್ತಿ ಬಂದರೂ ಜೆಡಿಎಸ್ ಮುಗಿಸಲು ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳನ್ನು ಗೆದ್ದು ತೋರಿಸುತ್ತೇವೆ ಎಂದು ಕುಮಾರಸ್ವಾಮಿ ಶಪಥ ಮಾಡಿದ್ದಾರೆ.;
ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಚನ್ನಪಟ್ಟಣ ಕ್ಷೇತ್ರದತ್ತ ಮುಖ ಮಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ಪುತ್ರನ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿದ್ದಾರೆ. ಪುತ್ರನ ಹ್ಯಾಟ್ರಿಕ್ ಸೋಲಿನ ಹತಾಶೆಯ ನಡುವೆಯೂ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸುವ ಘೋಷಣೆ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕುಟುಂಬ ರಾಜಕಾರಣವನ್ನು ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದರೂ ನಿಖಿಲ್ ನೇತೃತ್ವದಲ್ಲೇ ಸಂಘಟನೆಗೆ ಸೂಚಿಸಿರುವುದು ಪಕ್ಷದ ಮುಖಂಡರು ಹಾಗೂ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಜೆಡಿಎಸ್ ನಿರ್ನಾಮದ ಕುರಿತ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಹತ್ತು ಜನ್ಮ ಎತ್ತಿ ಬಂದರೂ ಜೆಡಿಎಸ್ ಮುಗಿಸಲು ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳನ್ನು ಗೆದ್ದು ತೋರಿಸುತ್ತೇವೆ ಎಂದು ಶಪಥ ಮಾಡಿದ್ದಾರೆ.
ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಹಾಸನದಲ್ಲಿ ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಹಿಂದ ಸಮುದಾಯಕ್ಕೆ ರಕ್ಷಣೆ ಕೊಟ್ಟಿದೆಯಾ, ಅವರ ಸ್ವಾಭಿಮಾನ ಉಳಿಸುವ ಕೆಲಸ ಮಾಡಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್ ಶಾಸಕರ ಆಪರೇಷನ್ ಕುರಿತ ಸಿಪಿವೈ ಹೇಳಿಕೆ ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಿಂದ 30 ಮಂದಿಯನ್ನು ಬಿಜೆಪಿಗೆ ಕರೆತಂದಿದ್ದು ನೋಡಿದ್ದೇನೆ. ಕಳೆದ 17 ತಿಂಗಳಲ್ಲಿ 30 ರಿಂದ 35 ಜನರ ಹಿಡಿದುಕೊಂಡು ಓಡಾಡುತ್ತಿದ್ದರು. ಅಂತವರ ಬಗ್ಗೆ ಚರ್ಚೆ ಅನವಶ್ಯಕ ಎಂದು ತಿರುಗೇಟು ನೀಡಿದ್ದಾರೆ.