ಮೆಟ್ರೋಗೆ ನಮ್ಮದು ಶೇ.80 ಅನುದಾನ, ಕೇಂದ್ರದ್ದೇನಿದ್ದರೂ ಶೇ.20 ಮಾತ್ರ: ಡಿಸಿಎಂ

ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.;

Update: 2025-08-10 07:32 GMT

"ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ. 80ರಷ್ಟು ವೆಚ್ಚ ಮಾಡಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರ ನೀಡಿರುವುದು ಕೇವಲ ಶೇ.20ರಷ್ಟು ಅನುದಾನ ಮಾತ್ರ, ಕೆಲವೆಡೆ ಅದು ಶೇ.11ಕ್ಕೆ ಸೀಮಿತವಾಗಿದೆ," ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಯೋಜನೆಯ ಕ್ರೆಡಿಟ್ ಕುರಿತ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.

ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ಮೋದಿಯವರು ಕನಿಷ್ಠ 1 ಲಕ್ಷ ಕೋಟಿ ರೂ. ವಿಶೇಷ ಅನುದಾನ ನೀಡಬೇಕು," ಎಂದು ಮನವಿ ಮಾಡಿದ ಅವರು, "ಮೆಟ್ರೋ ಯೋಜನೆಯ ಭೂಸ್ವಾಧೀನಕ್ಕೆ ಸಂಪೂರ್ಣ ಹಣವನ್ನು ರಾಜ್ಯ ಸರ್ಕಾರವೇ ನೀಡಿದೆ. ಕೇಂದ್ರವು ಶೇ.50ರಷ್ಟು ಪಾಲು ಕೊಡಬೇಕಿತ್ತು, ಆದರೆ ಅದನ್ನು ನೀಡಿಲ್ಲ. ದೇಶದ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಬೆಂಗಳೂರಿಗೆ ಅಹಮದಾಬಾದ್ನಂತೆ ಸಮಾನ ಪಾಲನ್ನು ನೀಡಿ. ನಾವು ರಾಜಕಾರಣ ಮಾಡುತ್ತಿಲ್ಲ, ಬೆಂಗಳೂರಿನ ಹಕ್ಕನ್ನು ಕೇಳುತ್ತಿದ್ದೇವೆ," ಎಂದು ಹೇಳಿದರು.

ರಾಜ್ಯದ ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡ ಡಿ.ಕೆ. ಶಿವಕುಮಾರ್, "ಕರ್ನಾಟಕದ ಯಾವೊಬ್ಬ ಬಿಜೆಪಿ ಸಂಸದರೂ ರಾಜ್ಯಕ್ಕೆ ಹತ್ತು ರೂಪಾಯಿ ಅನುದಾನವನ್ನೂ ತಂದಿಲ್ಲ. ಕೇವಲ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿ, ಮಾಧ್ಯಮಗಳಲ್ಲಿ ಫೋಟೋ ಹಾಕಿಸಿಕೊಂಡರೆ ಸಾಧನೆಯಾಗುವುದಿಲ್ಲ. ಕೇಂದ್ರ ಜಲಶಕ್ತಿ ಸಚಿವರನ್ನು ಬಿಟ್ಟರೆ, ಬೇರೆ ಯಾರಿಂದಲೂ ನಯಾಪೈಸೆ ಸಹಕಾರ ಸಿಕ್ಕಿಲ್ಲ. ಕನಿಷ್ಠ ನರೇಗಾ ಯೋಜನೆಯ ಹಣವನ್ನೂ ಬಿಡುಗಡೆ ಮಾಡಿಲ್ಲ. ಸಂಸದರು ರಾಜಕಾರಣ ಬಿಟ್ಟು, ಜನರ ಸೇವೆಗೆ ಅನುದಾನ ತರುವ ಕೆಲಸ ಮಾಡಲಿ," ಎಂದು ಕುಟುಕಿದರು.

ಮೆಟ್ರೋ ಕ್ರೆಡಿಟ್ ಕುರಿತ ಬಿಜೆಪಿ ಹೇಳಿಕೆಗಳಿಗೆ ಸವಾಲು ಹಾಕಿದ ಅವರು, "ಯಾರ ಕೊಡುಗೆ ಎಷ್ಟು ಎಂಬುದರ ಬಗ್ಗೆ ಅವರೂ ಅಂಕಿಅಂಶ ಬಿಡುಗಡೆ ಮಾಡಲಿ, ನಾನೂ ಮಾಡುತ್ತೇನೆ. ಈ ಯೋಜನೆಗೆ ಅಡಿಪಾಯ ಹಾಕಿದ್ದು ಎಸ್.ಎಂ. ಕೃಷ್ಣ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ನಿರ್ಮಾಣವಾಗಿದ್ದು ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ," ಎಂದು ನೆನಪಿಸಿದರು.

"ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರೂ, ನಾವು ಪ್ರಧಾನಿಗಳಿಗೆ ಗೌರವ ನೀಡಿ ಉದ್ಘಾಟನೆಗೆ ಆಹ್ವಾನಿಸಿದ್ದೇವೆ. ಡಬಲ್ ಡೆಕ್ಕರ್​​ನಂತಹ (ಒಂದೇ ಕಂಬದ ಮೇಲೆ ಮೇಲ್ಸೇತುವೆ ಮತ್ತು ಮೆಟ್ರೋ) ಮಾದರಿ ಯೋಜನೆಯನ್ನು ನಾವು ನೀಡಿದ್ದೇವೆ. ಐಟಿ ಉದ್ಯಮಗಳಿಗೆ ಅನುಕೂಲವಾಗುವ ಈ ಹಳದಿ ಮಾರ್ಗಕ್ಕೆ ಹಣ ನೀಡಿದ ಇನ್ಫೋಸಿಸ್, ಡೆಲ್ಟಾ, ಬಯೋಕಾನ್ ಮತ್ತಿತರ ಸಂಸ್ಥೆಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ," ಎಂದರು.

Tags:    

Similar News