Wayanad Landslide | ರಾಜ್ಯವು ಎಲ್ಲ ನೆರವು ನೀಡಲಿದೆ: ನೆರೆ ರಾಜ್ಯಕ್ಕೆ ನೆರವಿನ ಹಸ್ತ ಚಾಚಿದ ಸಿಎಂ ಸಿದ್ದರಾಮಯ್ಯ

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕೂಡ ಕೇರಳ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದು, ಅಗತ್ಯವಿದ್ದರೆ ರಾಜ್ಯದಿಂದ ರಕ್ಷಣಾ ತಂಡಗಳನ್ನು ಕಳುಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ

Update: 2024-07-30 11:56 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಇದುವರೆಗೆ 90ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. 

ಈ ಬಗ್ಗೆ ತಮ್ಮ ʼಎಕ್ಸ್‌ʼ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ವಯನಾಡಿನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ತೀವ್ರ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಹೃದಯ ಮಿಡಿಯುತ್ತಿದೆ. ಈ ಸವಾಲಿನ ಸಮಯದಲ್ಲಿ ಕೇರಳಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡಲು ಕರ್ನಾಟಕ ಬದ್ಧವಾಗಿದೆ. ನಾವು ಒಗ್ಗಟ್ಟಾಗಿ ಮತ್ತು ಬಲವಾಗಿ ನಿಲ್ಲೋಣ" ಎಂದು ಅವರು ಪೋಸ್ಟ್‌ ಮಾಡಿದ್ದಾರೆ. 

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕೂಡ ಕೇರಳ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದು, ಅಗತ್ಯವಿದ್ದರೆ ರಾಜ್ಯದಿಂದ ರಕ್ಷಣಾ ತಂಡಗಳನ್ನು ಕಳುಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಅಗ್ನಿಶಾಮಕ ಮತ್ತು ರಕ್ಷಣಾ, ನಾಗರಿಕ ರಕ್ಷಣೆ, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ತುರ್ತು ಕ್ಷಿಪ್ರಕಾರ್ಯಪಡೆ ತಂಡಗಳ 250 ಸದಸ್ಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ.

ಎನ್‌ಡಿಆರ್‌ಎಫ್‌ನ ಹೆಚ್ಚುವರಿ ತಂಡ ಮತ್ತು ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳು ರಕ್ಷಣಾ ಕಾರ್ಯಗಳಲ್ಲಿ ನೆರವಾಗಲು ವಯನಾಡಿಗೆ ತೆರಳಲು ಸೂಚನೆ ನೀಡಲಾಗಿದೆ.

ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು, ಎಂಐ-17 ಮತ್ತು ಎಎಲ್‌ಎಚ್‌ಗಳನ್ನು ಸಹ ನಿಯೋಜಿಸಲಾಗಿದೆ ಮತ್ತು ಅವರು ರಕ್ಷಣಾ ಕಾರ್ಯಾಚರಣೆಯನ್ನು ಸಂಯೋಜಿಸಲಿದ್ದಾರೆ.

ಕೇರಳ ಆರೋಗ್ಯ ಇಲಾಖೆಯು ನಿಯಂತ್ರಣ ಕೊಠಡಿಯನ್ನು ತೆರೆದಿದೆ ಮತ್ತು ತುರ್ತು ಸಹಾಯದ ಅಗತ್ಯವಿರುವವರು ಸಂಪರ್ಕಿಸಬಹುದಾದ ಎರಡು ಸಂಖ್ಯೆಗಳನ್ನು ನೀಡಿದೆ- 9656938689 ಮತ್ತು 8086010833 ಕ್ಕೆ ಸಂಪರ್ಕಿಸಲು ಸೂಚಿಸಲಾಗಿದೆ.

ನೂರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಮತ್ತು ಭಾರೀ ಭೂಕುಸಿತದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಂಬಲಾಗಿದೆ.

Tags:    

Similar News