ನೀರಿನ ಬರ | ತಮಿಳುನಾಡು ಬೇಡಿಕೆ ತಿರಸ್ಕರಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ
'ಫೆಬ್ರವರಿಯಿಂದ ಏಪ್ರಿಲ್ ವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಬಿಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ, ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳಲು ರಾಜ್ಯವು ಪ್ರತಿ ತಿಂಗಳು ಅರ್ಧ ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಬಿಟ್ಟಿದೆ' ಎಂದು ಕರ್ನಾಟಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸಮಿತಿಯ ಮುಂದಿನ ಸಭೆ ಮೇ 16ರಂದು ನಡೆಯಲಿದೆ.;
ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ಕುಡಿಯುವ ನೀರಿಗೂ ಜನರು ಪರದಾಡುವ ಸ್ಥಿತಿ ಬಂದಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಜಲಾಶಯಗಳಿಂದ 5.3 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಿರಸ್ಕರಿಸಿದೆ.
ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಸಮಿತಿಯ 95ನೇ ಸಭೆಯಲ್ಲಿ, 'ಜಲಾಶಯಗಳಲ್ಲಿ ನೀರು ಬಹಳ ಕಡಿಮೆ ಇದೆ. ಅದು ಸ್ಥಳೀಯ ಕುಡಿಯುವ ನೀರಿನ ಉದ್ದೇಶಗಳಿಗೆ ಮಾತ್ರ ಸಾಕಾಗುತ್ತದೆ' ಎಂದು ಅಭಿಪ್ರಾಯಪಡಲಾಯಿತು.
'ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಪ್ರಮಾಣವು ತುಂಬಾ ಕಡಿಮೆ ಇದ್ದು, ನೈಸರ್ಗಿಕ ಹರಿವನ್ನು ಸಹ ನಿರ್ವಹಿಸುವುದು ಕಷ್ಟಕರವಾಗಿದೆ. ಕಾವೇರಿ ನ್ಯಾಯಮಂಡಳಿಯ ಆದೇಶದ ಪ್ರಕಾರ, ತಮಿಳುನಾಡಿಗೆ ಪ್ರತಿದಿನ 1,000 ಕ್ಯೂಸೆಕ್ ನೀರು ಬಿಡಬೇಕಿದೆ. ಆದರೆ, ಜಲಾಶಯಗಳಲ್ಲಿ ನೀರಿನ ಕೊರತೆಯಿಂದಾಗಿ ಈಗ 150 ಕ್ಯೂಸೆಕ್ ನೀರು ಅಂತರರಾಜ್ಯ ಗಡಿ ಬಿಂದು ಬಿಳಿಗುಂಡ್ಲುವಿಗೆ ತಲುಪುತ್ತಿದೆ' ಎಂದು ಸಮಿತಿ ಗಮನಿಸಿತು.
ಸುಪ್ರೀಂ ಕೋರ್ಟ್ ಮಾರ್ಪಡಿಸಿದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಾರ ಕಾವೇರಿ ನೀರಿನ ಬಾಕಿ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪರಿಸರದ ಹರಿವನ್ನು ಕಾಪಾಡಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಸಮಿತಿ ನಿರಾಕರಿಸಿತು.
ರಾಜ್ಯದ ನಾಲ್ಕು ಜಲಾಶಯಗಳಲ್ಲಿ ನೀರಿನ ಮಟ್ಟ ಬಹಳ ಕಡಿಮೆ ಇದೆ. ಇದು ಕುಡಿಯುವ ನೀರಿನ ಬೇಡಿಕೆ ಪೂರೈಸಲು ಸಾಕು. ಈಗ ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಸ್ಪಷ್ಟಪಡಿಸಿದರು. 'ಫೆಬ್ರವರಿಯಿಂದ ಏಪ್ರಿಲ್ ವರೆಗೆ ಕರ್ನಾಟಕವು 7.3 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಕೇವಲ 2 ಟಿಎಂಸಿ ನೀರು ಬಿಟ್ಟಿದೆ. ಬಾಕಿ ನೀರನ್ನು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು' ಎಂದು ತಮಿಳುನಾಡು ಕೋರಿತು.
'ಫೆಬ್ರವರಿಯಿಂದ ಏಪ್ರಿಲ್ ವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಬಿಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ, ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳಲು ರಾಜ್ಯವು ಪ್ರತಿ ತಿಂಗಳು ಅರ್ಧ ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಬಿಟ್ಟಿದೆ' ಎಂದು ಕರ್ನಾಟಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸಮಿತಿಯ ಮುಂದಿನ ಸಭೆ ಮೇ 16ರಂದು ನಡೆಯಲಿದೆ.