ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆಗೆ 160 ಕೋಟಿ ರೂ. ಅನುದಾನ

ಕೃಷಿಗೆ ಮುಖ್ಯವಾಗಿ ಬೇಕಿರುವುದು ಉತ್ತಮ ಗುಣಮಟ್ಟದ ಬೀಜದ ತಳಿಗಳು ಹಾಗೂ ತಂತ್ರಜ್ಞಾನ. ಈ ಮೂಲಕ ಕೃಷಿ ಅಭಿವೃದ್ಧಿ ಸಾಧ್ಯ. ಪರಂಪರೆಯ ಬೀಜಗಳಿಗೆ ಬಲವಾದ ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸಬೇಕು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Update: 2025-11-25 14:17 GMT
ದೇಶಿ ಬಿತ್ತನೆ ಬೀಜಗಳು
Click the Play button to listen to article

ಪೌಷ್ಟಿಕತೆ ಮತ್ತು ಪರಿಸರ ಸುಸ್ಥಿರತೆಯನ್ನು ಕಾಪಾಡುವ ದೇಶಿ ಬೀಜ ತಳಿಗಳ ಪರಂಪರೆಗೆ ಬಲ ತುಂಬಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರು ಒಂದೇ ಬೆಳೆ ಪದ್ಧತಿಗೆ ಒಗ್ಗಿಕೊಳ್ಳುತ್ತಿರುವುದು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಕೃಷಿಯಲ್ಲಿ ಸ್ಥಳೀಯ ಜ್ಞಾನ ಮರೆಯಾಗುತ್ತಿರುವ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಗಳವಾರ (ನ.25) ಬೆಂಗಳೂರಿನ ಕೃಷಿ ಇಲಾಖೆಯ ಸಂಗಮ ಸಭಾಂಗಣದಲ್ಲಿ ‘ಬೀಜ ಪರಂಪರೆ’ ಕುರಿತ ರಾಷ್ಟ್ರೀಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕೃಷಿ ಜೀವವೈವಿಧ್ಯತೆ, ರೈತರ ಜ್ಞಾನ ಮತ್ತು ನಮ್ಮ ಸಂಸ್ಕೃತಿಯೇ ಶತಮಾನಗಳಿಂದ ಸ್ಥಳೀಯ ಆಹಾರ ಮತ್ತು ಪೌಷ್ಟಿಕ ಭದ್ರತೆಯ ಆಧಾರ" ಎಂದು ಹೇಳಿದರು.

ಪರಂಪರೆಯ ಬೀಜಗಳಿಗೆ ಮಾರುಕಟ್ಟೆ ಸೃಷ್ಟಿಯಾಗಲಿ

ಉತ್ತಮ ಗುಣಮಟ್ಟದ ಬೀಜ ಮತ್ತು ತಂತ್ರಜ್ಞಾನಗಳು ಕೃಷಿ ಅಭಿವೃದ್ಧಿಗೆ ಅತ್ಯಗತ್ಯ ಎಂದು ಹೇಳಿದ ಸಚಿವರು, "ಪರಂಪರೆಯ ಬೀಜಗಳಿಗೆ ಬಲವಾದ ಮಾರುಕಟ್ಟೆ ಸಂಪರ್ಕ ನಿರ್ಮಿಸಬೇಕು. ಡಿಜಿಟಲ್ ಸಾಧನಗಳ ಬಳಕೆ ಹಾಗೂ ಹೊಸ ಪ್ರಯೋಗಗಳನ್ನು ಉತ್ತೇಜಿಸುವ ಮೂಲಕ ರೈತರು ಸ್ಥಿರವಾದ ಬೀಜ ಉದ್ಯಮಗಳನ್ನು ನಡೆಸಲು ಹೊಸ ಮಾರ್ಗಗಳ ಬಗ್ಗೆ ಚಿಂತಿಸಬೇಕು," ಎಂದು ಕರೆ ನೀಡಿದರು.

ರೈತರಿಗೆ ಮತ್ತು ವಿಜ್ಞಾನಿಗಳಿಗೆ ಸಲಹೆ

ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ವಿಜ್ಞಾನಿಗಳು ದೇಶಿ ತಳಿಗಳ ಪ್ರದರ್ಶನ ಮತ್ತು ಸಮುದಾಯ ಸಂರಕ್ಷಣಾ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಬೀಜ ಸಂರಕ್ಷಣೆಗೆ ನೆರವಾಗಬೇಕು. ವಿದೇಶಗಳ ಆಧುನಿಕ ಕೃಷಿ ತಂತ್ರಜ್ಞಾನದ ಮುಂದೆ ಸ್ಪರ್ಧಿಸುವುದು ಇಂದಿನ ಸವಾಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರದ ಬೆಂಬಲ

2024ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಸಮುದಾಯ ಬೀಜ ಬ್ಯಾಂಕ್‌ ಸ್ಥಾಪಿಸುವುದಾಗಿ ಘೋಷಿಸಿದ್ದು, ಲ್ಯಾಂಡ್ ರೇಸ್‌ (ಸ್ಥಳೀಯ ತಳಿ) ಸಂರಕ್ಷಣೆಗಾಗಿ 160 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಿದೆ. ಈ ಮೂಲಕ ಬೀಜ ಪರಂಪರೆಯನ್ನು ಉಳಿಸುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸಚಿವರು ಹಾರೈಸಿದರು. 

Tags:    

Similar News