Waqf Asset Issue | ವಿಪಕ್ಷಗಳಿಗೆ ದಾಳವಾದ ವಕ್ಫ್‌ ಆಸ್ತಿ ವಿವಾದ; ಸರ್ಕಾರಕ್ಕೆ ಬಿಸಿ ತುಪ್ಪವಾದ ರೈತರ ಆಕ್ರೋಶ

ವಕ್ಫ್ ಆಸ್ತಿ ವಿವಾದ ಕುರಿತು ಸಿಎಂ ಸಿದ್ದರಾಮಯ್ಯ ಆದಿಯಾಗಿ ಸರ್ಕಾರದ ಸಚಿವರು ಸ್ಪಷ್ಟೀಕರಣ ನೀಡುತ್ತಿದ್ದರೂ ವಿವಾದ ಮಾತ್ರ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಪ್ರತಿಪಕ್ಷ ಬಿಜೆಪಿ ಮಾತ್ರ ವಿವಾದವನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಮುಂದಾಗಿದೆ.;

Update: 2024-10-30 11:48 GMT

ವಕ್ಫ್ ಆಸ್ತಿಗಳ ಇಂದೀಕರಣ ವಿವಾದ ತೀವ್ರ ಸ್ವರೂಪ ಪಡೆಯುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಆರಂಭವಾದ ಈ ವಿವಾದ ಧಾರವಾಡ, ಕಲಬುರಗಿ, ಚಿತ್ರದುರ್ಗ,ತುಮಕೂರು, ಕರಾವಳಿ ಜಿಲ್ಲೆಗಳು ಹಾಗೂ ಹಳೆ ಮೈಸೂರು ಭಾಗದ ಮಂಡ್ಯ ಜಿಲ್ಲೆಗೂ ವ್ಯಾಪಿಸಿದೆ. ಒಂದೆಡೆ ವಕ್ಫ್ ಆಸ್ತಿ ಕುರಿತ ನೋಟಿಸ್ ರೈತರಿಗೆ ತಲೆನೋವಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ಆಡಳಿತ ರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಿಗೆ ವಿವಾದವು ರಾಜಕೀಯ ದಾಳವಾಗಿ ಬಳಕೆಯಾಗುತ್ತಿದೆ.

ವಕ್ಫ್ ಆಸ್ತಿ ವಿವಾದ ಕುರಿತು ಸಿಎಂ ಸಿದ್ದರಾಮಯ್ಯ ಆದಿಯಾಗಿ ಸರ್ಕಾರದ ಸಚಿವರು ಸ್ಪಷ್ಟೀಕರಣ ನೀಡುತ್ತಿದ್ದರೂ ವಿವಾದ ಮಾತ್ರ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. 

ಕಲಬುರಗಿಯಲ್ಲಿ ರೈತರಿಗೆ ನೋಟಿಸ್

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ನೂರಾರು ಎಕರೆ ರೈತರ ಜಮೀನಿನ ಪಹಣಿಯಲ್ಲಿ ದಿಢೀರನೇ ವಕ್ಫ್ ಬೋರ್ಡ್ ಹೆಸರು ದಾಖಲಾಗಿದೆ. ಪಹಣಿಯ ಕಾಲಂ 11 ರಲ್ಲಿ ವಕ್ಫ್‌ ಬೋರ್ಡ್‌ ಆಸ್ತಿ ಎಂದು ದಾಖಲಾಗಿದ್ದು, ಈ ಸಂಬಂಧ 33 ರೈತರಿಗೆ ನೋಟಿಸ್ ತಾಲೂಕು ಆಡಳಿತ ನೋಟಿಸ್‌ ಕೂಡ ನೀಡಿದೆ.

ವಕ್ಫ್‌ ಜಾಗಕ್ಕೆ ಮಂಡ್ಯದಲ್ಲಿ ಮನವಿ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ತಮ್ಮ ಹೆಸರಿಗೆ ಪಹಣಿ ಮಾಡಿಕೊಡುವಂತೆ ವಕ್ಫ್ ಕಮಿಟಿಗೆ ಬೆಳ್ಳೂರು ಮುಸ್ಲಿಮರು ಪತ್ರ ಬರೆದಿದ್ದಾರೆ.

ಗ್ರಾಮದ ಸರ್ವೆ ನಂ. 472ರಲ್ಲಿ 20 ಎಕರೆ ಜಾಮೀಯಾ ಮಸೀದಿಗೆ, 34 ಎಕರೆ 12 ಗುಂಟೆ ಸೂಫಿ ಸಂತರಿಗೆ, ಸರ್ವೆ ನಂ 73ರಲ್ಲಿ 6 ಎಕರೆ 6 ಗುಂಟೆ ಖಬರಸ್ಥಾನ್ ಹೆಸರಿಗೆ ಪಹಣಿ ಮಾಡಿಕೊಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

1921, 1932 ಹಾಗೂ 1940 ರಲ್ಲಿ ಅಂದಿನ ಮೈಸೂರು ಸರ್ಕಾರವು ಮಸೀದಿ, ಖಬರಸ್ಥಾನ್ ಮತ್ತು ಸೂಫಿ ಸಂತರಿಗೆ ಜಮೀನು ನೀಡಿ ಆದೇಶಿಸಿದೆ. ಆ ಜಮೀನುಗಳು ಸ್ಕೆಚ್ ಆಗಿರುವ ಆದೇಶ ಸಂಖ್ಯೆಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಪತ್ರದಲ್ಲಿ ಉಲ್ಲೇಖಿಸಿರುವ ಸರ್ವೆ ನಂ. 472ರಲ್ಲಿ 14.24 ಗುಂಟೆ ಗೋಮಾಳ ಜಮೀನಿದೆ. ಜೊತೆಗೆ 5ಕ್ಕೂ ಹೆಚ್ಚು ರೈತರಿಗೆ ಸೇರಿದ 19.88 ಗುಂಟೆ ಜಮೀನು ಕೂಡ ಇದೆ. ಈ ಜಾಗವನ್ನು ತಮ್ಮ ಹೆಸರಿಗೆ ಪಹಣಿ ಮಾಡಿಕೊಡುವಂತೆ ಮುಸ್ಲಿಮರು ಮನವಿ ಮಾಡಿದ್ದಾರೆ.

ಶಂಕರಲಿಂಗ ಮಠಕ್ಕೆ ವಕ್ಫ್ ನೋಟಿಸ್

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಬಿ.ಕೆ ಗ್ರಾಮದ ಸಿದ್ದ ಶಂಕರಲಿಂಗ ಮಠದ 8.16 ಎಕರೆ ಜಮೀನಿಗೆ ವಕ್ಫ್ ಮಂಡಳಿ ನೋಟಿಸ್ ಬಂದಿದೆ. 1952 ರಲ್ಲಿ ಸಿಂದಗಿಯ ಕುಲಕರ್ಣಿ ಮನೆತನದಿಂದ ಮಠಕ್ಕೆ ದಾನವಾಗಿ ನೀಡಿದ್ದ ಆಸ್ತಿ ಇದಾಗಿದ್ದರೂ 2018-19ರ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದೆ. ಈ ಅವಧಿಯಲ್ಲಿ ಯತಿಮ್ ಶಾ ವಾಲಿ ಜಾಮೀಯಾ ಮಸೀದ್ ಸುನ್ನಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆಯಾಗಿತ್ತು. ಈಗ ನೋಟಿಸ್‌ ಬಂದಿರುವುದಕ್ಕೆ ಪೀಠಾಧಿಕಾರಿ ಸಿದ್ದರಾಜು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಜೆಪಿಸಿ ಅಧ್ಯಕ್ಷರಿಗೆ ಪತ್ರ ಬರೆದ ತೇಜಸ್ವಿ ಸೂರ್ಯ

ವಿಜಯಪುರ ಮತ್ತು ಕರ್ನಾಟಕದ ಸುತ್ತಮುತ್ತಲಿನ ಇತರ ಪ್ರದೇಶಗಳ ರೈತರ ಭೂಮಿಗೆ ವಕ್ಫ್ ಆಸ್ತಿ ಎಂದು ತಪ್ಪಾಗಿ ನೋಟಿಸ್ ನೀಡಿರುವ ಕುರಿತ ವಿಚಾರಣೆಗೆ ರೈತರ ನಿಯೋಗಕ್ಕೆ ಆಹ್ವಾನ ನೀಡುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಕ್ಫ್‌ ತಿದ್ದುಪಡಿ ಕಾಯ್ದೆಯ ಜಂಟಿ ಸದಸ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಅವರಿಗೆ ಪತ್ರ ಬರೆದಿದ್ದಾರೆ.

ವಕ್ಫ್‌ ಬೋರ್ಡ್‌ ಹೆಸರು ತೆರವು

ವಕ್ಫ್ ಆಸ್ತಿ ವಿವಾದ ತೀವ್ರಗೊಳ್ಳುತ್ತಿದ್ದಂತೆ ವಿಜಯಪುರ ಜಿಲ್ಲೆಯ ಕೆಲ ರೈತರ ಪಹಣಿಗಳಿಂದ ವಕ್ಫ್ ಬೋರ್ಡ್ ಪದವನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆಗೆದು ಹಾಕಿದ್ದಾರೆ. ಇದು ಜಿಲ್ಲೆಯ ರೈತರ ಹೋರಾಟಕ್ಕೆ ದೊರೆತ ಮೊದಲ ಜಯ ಎಂದು ಬಿಜೆಪಿ ಬಣ್ಣಿಸಿದೆ.

ಅ. 9ರಂದು ತೆನೆಹಳ್ಳಿ ಗ್ರಾಮದ ರೈತ ಯಮನಪ್ಪ ಕೆಂಗನಾಳ ಅವರ ಜಮೀನಿನ ಪಹಣಿಯಲ್ಲಿ ನೋಟಿಸ್ ನೀಡದೇ ಪಹಣಿಯ ಕಾಲಂ ನಂಬರ್ 11ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ನಮೂದಿಸಲಾಗಿತ್ತು. ಇಂಡಿ ತಾಲ್ಲೂಕಿನ 41 ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ತೆಗೆದು ಹಾಕುವಂತೆ ರೈತರು ಮನವಿ ಮಾಡಿದ್ದಾರೆ.

Tags:    

Similar News