Waqf Asset Issue : ಕೊಳೆಗೇರಿ ವಾಸಿಗಳಿಗೆ ಹಕ್ಕುಪತ್ರ ವಿತರಣೆಗೂ ಅಡ್ಡಿಯಾದ ವಕ್ಫ್ ಆಸ್ತಿ ವಿವಾದ
263 ಬಡವರಿಗೆ ನಿವೇಶನ ಹಂಚಲು ವಸತಿ ಇಲಾಖೆ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಇದೇ ಜುಲೈ 29 ರಂದು ಮಸ್ಕಿ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.
ವಕ್ಫ್ ಬೋರ್ಡ್ ಆಸ್ತಿ ವಿವಾದ ಕೊಳೆಗೇರಿ ನಿವಾಸಿಗಳನ್ನೂ ಸಂಕಷ್ಟಕ್ಕೆ ತಳ್ಳಿದೆ. ಕೊಳೆಗೇರಿ ನಿವಾಸಿಗಳಿಗೆ ವಿತರಿಸಬೇಕಾಗಿದ್ದ ಹಕ್ಕು ಪತ್ರಗಳು ವಕ್ಫ್ ಆಸ್ತಿ ಎಂಬ ಕಾರಣಕ್ಕೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ದೂಳು ತಿನ್ನುತ್ತಾ ಬಿದ್ದಿವೆ. ಹೀಗಾಗಿ ಸಮಸ್ಯೆ ಬಡವರ ಮನೆಗೂ ತಟ್ಟಿದಂತಾಗಿದೆ.
ಏನಿದು ಭೂಮಿ ವಿವಾದ?
ಮಸ್ಕಿ ಪಟ್ಟಣದಲ್ಲಿ ಸಾಜೀದ್ ಸಾಬ್ ಖಾಜಿ ಎಂಬುವರು ಸರ್ವೇ ನಂ.7/1ರಲ್ಲಿರುವ ತಮ್ಮ ಏಳು ಎಕರೆ ಇನಾಮ್ತಿ ಭೂಮಿಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮಾರಾಟ ಮಾಡಿದ್ದರು. ಈ ಜಮೀನಿನನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಯು ನಿವೇಶನವಾಗಿ ಪರಿವರ್ತಿಸಿತ್ತು. ಈ ಜಾಗದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು 30 ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿವೆ.
2023ರ ಜುಲೈ 14ರಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹೆಸರಿನಲ್ಲಿ ಜಮೀನಿನ ಪಹಣಿ ನೋಂದಣಿಯಾಗಿದೆ. ನಿವೇಶನದಾರರಿಗೆ ಹಕ್ಕುಪತ್ರ ವಿತರಣೆಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಧರಿಸಿ, ನಿವಾಸಿಗಳಿಂದ 1000ರೂಪಾಯಿ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಸಹ ಕಟ್ಟಿಸಿಕೊಂಡಿದ್ದಾರೆ.
ಅವರಲ್ಲಿ 263 ಬಡವರಿಗೆ ನಿವೇಶನ ಹಂಚಲು ವಸತಿ ಇಲಾಖೆ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಇದೇ ಜುಲೈ 29 ರಂದು ಮಸ್ಕಿ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಹಕ್ಕುಪತ್ರ ವಿತರಣೆಗಾಗಿ ವಸತಿ ಇಲಾಖೆ ಆಹ್ವಾನ ಪತ್ರಿಕೆಯನ್ನೂ ಸಿದ್ಧಪಡಿಸಿತ್ತು. ಆದರೆ, ಸಾಜಿದ್ ಸಾಬ್ ಮಾರಾಟ ಮಾಡಿರುವ ಏಳು ಎಕರೆ ಭೂಮಿ ವಕ್ಫ್ ಮಂಡಳಿಗೆ ಸೇರಿದೆ. ಹಕ್ಕುಪತ್ರ ನೀಡದಂತೆ ಸಚಿವ ಜಮೀರ್ ಅಹ್ಮದ್ ಅವರ ಮೌಖಿಕ ಸೂಚನೆ ಮೇರೆಗೆ ಅಧಿಕಾರಿಗಳು ಕಾರ್ಯಕ್ರಮ ರದ್ದು ಮಾಡಿದ್ದರು. ಹಕ್ಕುಪತ್ರ ಪಡೆಯಲು ಡಿಡಿ ಕಟ್ಟಿದ್ದ ಕೊಳೆಗೇರಿ ನಿವಾಸಿಗಳು ಈಗ ಹಣವೂ ಇಲ್ಲ. ಹಕ್ಕುಪತ್ರವೂ ಇಲ್ಲದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಹಕ್ಕುಪತ್ರ ನೀಡುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.