ವಕ್ಫ್‌ ಆಸ್ತಿ ವಿವಾದ | ಟಾಸ್ಕ್ ಪೋರ್ಸ್ ರಚನೆ; ಸಚಿವ ಎಂ.ಬಿ.ಪಾಟೀಲ ಹೇಳಿಕೆ

ʼಈ ಟಾಸ್ಕ್ ಪೋರ್ಸ್ 1974 ರ ಗೆಜೆಟ್ ಪೂರ್ವದ ಜಿಲ್ಲೆಯ ಎಲ್ಲ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿ, ಈಗ ಉಂಟಾಗಿರುವ ಗೊಂದಲ ಬಗೆಹರಿಸಲಿದೆ' ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.;

Update: 2024-10-28 07:54 GMT
ಎಂ ಬಿ ಪಾಟೀಲ್‌
Click the Play button to listen to article

'ವಿಜಯಪುರ ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಕುರಿತು ಉಂಟಾಗಿರುವ ಗೊಂದಲ, ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುವುದು. ಈ ಟಾಸ್ಕ್ ಪೋರ್ಸ್ 1974 ರ ಗೆಜೆಟ್ ಪೂರ್ವದ ಜಿಲ್ಲೆಯ ಎಲ್ಲ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿ, ಈಗ ಉಂಟಾಗಿರುವ ಗೊಂದಲ ಬಗೆಹರಿಸಲಿದೆ' ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಕ್ಫ್‌ ಆಸ್ತಿ ವಿಷಯವಾಗಿ ವಿಜಯಪುರ ಜಿಲ್ಲೆಯಲ್ಲಿ ಕೆಲ ರಾಜಕಾರಣಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಹಿಂದೂಗಳ ಭೂಮಿಯನ್ನು ಮುಸ್ಲಿಮರಿಗೆ ಹಂಚಲಾಗುತ್ತಿದೆ ಎಂದು ಮಾಧ್ಯಮಗಳ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿವಾದ ಎಬ್ಬಿಸಿದ್ದಾರೆ' ಎಂದು ದೂರಿದರು.

“ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ರೈತರಿಗೆ ಸೇರಿದ 1,200 ಎಕರೆ ಭೂಮಿ ವಕ್ಫ್‌ ಆಸ್ತಿಯಾಗಿದೆ ಎಂದು ಗೊಂದಲ ಉಂಟುಮಾಡಲಾಗಿದೆ. ಹೊನವಾಡದಲ್ಲಿ 10 ಎಕರೆ 29 ಗುಂಟೆ ಮಾತ್ರ ವಕ್ಫ್‌ ಆಸ್ತಿ ಇದೆ. ಈ ಕುರಿತ ವಿವಾದ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಉಳಿದಂತೆ ಒಂದೇ ಒಂದು ಎಕರೆ ರೈತರ ಭೂಮಿ ವಕ್ಫ್‌ ಅಸ್ತಿಯಲ್ಲ. ಈ ಸಂಬಂಧ ಯಾರಿಗೂ ನೋಟಿಸ್‌ ನೀಡಿಲ್ಲ. ರೈತರ ಹೆಸರಿನಲ್ಲೇ ಆಸ್ತಿ ಇದೆ. ಉತಾರದಲ್ಲೂ ರೈತರ ಹೆಸರೇ ಇದೆ' ಎಂದು ಸ್ಪಷ್ಟಪಡಿಸಿದರು.

'ವಿಜಯಪುರ ಜಿಲ್ಲೆಯಲ್ಲಿ ಈ ಮೊದಲು ಒಟ್ಟು 14,201 ಎಕರೆ ವಕ್ಫ್‌ ಆಸ್ತಿ ಇತ್ತು. ಇದರಲ್ಲಿ 1,459 ಎಕರೆ ಭೂಮಿ ಇನಾಂ ರದ್ದು ಕಾಯ್ದೆಯಡಿ ವಕ್ಫ್‌ ಕೈತಪ್ಪಿ ಹೋಗಿದೆ. ಭೂ ಸುಧಾರಣೆ ಕಾಯ್ದೆಯಡಿ 11,835 ಎಕರೆ ರೈತರಿಗೆ ಹಂಚಿಕೆಯಾಗಿದೆ ಮತ್ತು ವಿವಿಧ ಯೋಜನೆಗಳಿಗೆ 939 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ಕೇವಲ 773 ಎಕರೆ ಮಾತ್ರ ವಕ್ಫ್‌ ಹೆಸರಿನಲ್ಲಿ ಇದೆ' ಎಂದರು.

'ಇನಾಂ ರದ್ದು ಕಾಯ್ದೆ ಮತ್ತು ಭೂಸುಧಾರಣೆ ಕಾಯ್ದೆಯಡಿ ರೈತರಿಗೆ ಹಂಚಿಕೆಯಾಗಿರುವ ಆಸ್ತಿ ಕುರಿತು ಇದುವರೆಗೂ ಇಂಡೀಕರಣ ಆಗದೇ ಇರುವುದರಿಂದ ವಕ್ಫ್‌ ಹೆಸರು ಇದ್ದು, ಇದನ್ನು ತೆಗೆದುಹಾಕುವ ಸಂಬಂಧ ಕಾನೂನು ಸಲಹೆ ಪಡೆದು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ' ಎಂದರು.

Tags:    

Similar News