ವಕ್ಫ್ ಆಸ್ತಿ ವಿವಾದ | ಸ್ವಾಮೀಜಿಗಳ ನೇತೃತ್ವದಲ್ಲಿ ರಕ್ತಕ್ರಾಂತಿ: ಈಶ್ವರಪ್ಪ ಎಚ್ಚರಿಕೆ
ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ವಕ್ಫ್ ಮಂಡಳಿ ತನ್ನದು ಎನ್ನುತ್ತಿರುವ ಆಸ್ತಿಯನ್ನು ರೈತರಿಗೆ ವಾಪಸ್ ಕೊಡದೆ ಇದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ರಕ್ತಕ್ರಾಂತಿ ಆದೀತು ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.;
ವಕ್ಫ್ ಆಸ್ತಿ ಇಂಡೀಕರಣದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ವಕ್ಫ್ ಮಂಡಳಿಯು ರೈತರ ಜಮೀನು, ಮಠ-ಮಂದಿರಗಳ ಆಸ್ತಿಯನ್ನು ತನ್ನದು ಎಂದು ದಾಖಲೆ ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ವಕ್ಫ್ ಮಂಡಳಿ ತನ್ನದು ಎನ್ನುತ್ತಿರುವ ಆಸ್ತಿಯನ್ನು ಹಿಂದಕ್ಕೆ ಕೊಡದೆ ಇದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ರಕ್ತಕ್ರಾಂತಿ ಆದೀತು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಕಲಬುರಗಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ರೈತರು ಜಮೀನು, ಮಠ-ಮಂದಿರಗಳಿಗೆ ಸೇರಿದ ಆಸ್ತಿಗಳು ಏಕಾಏಕಿ ಬದಲಾಗುತ್ತದೆ ಎಂದರೆ ಏನರ್ಥ? ರಾಜ್ಯದ ಎಲ್ಲ ಸಮುದಾಯಗಳ ಸ್ವಾಮೀಜಿಗಳು ರೈತರ ಪರವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಆದಷ್ಟು ಬೇಗ ವಕ್ಫ್ ಮಂಡಳಿ ಹಾಗೂ ವಕ್ಫ್ ಕಾಯ್ದೆಯನ್ನು ರದ್ದು ಮಾಡಬೇಕು' ಎಂದರು.
'ಮುಸ್ಲಿಮರ ಬಗ್ಗೆ ಪ್ರೀತಿ ಇರಿಸಿಕೊಂಡ ಸಚಿವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ದಾನ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರೈತರು ಜಮೀನು, ದೇವಸ್ಥಾನಗಳ ಆಸ್ತಿ ಕೊಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಸಾಧು- ಸಂತರು ಒಟ್ಟಾಗಿ ಹೋಗುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸಬೇಕು. ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದರು.
'ವಕ್ಫ್ ಆಸ್ತಿಯನ್ನು ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ, ಸಿ.ಎಂ. ಇಬ್ರಾಹಿಂ, ರಹೀಂ ಖಾನ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಲೂಟಿ ಮಾಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಯ ಸಂಸತ್ತಿನ ಜಂಟಿ ಸದನ ಸಮಿತಿಯ ಮುಂದೆ ಅನ್ವರ್ ಮಾಣಿಪ್ಪಾಡಿ ವರದಿ ಇರಿಸಿ ಚರ್ಚೆ ಮಾಡಿದರೆ ಎಲ್ಲರದ್ದೂ ಹೊರಗಡೆ ಬರುತ್ತದೆ' ಎಂದರು.
'ಸಿಎಂ ಸಿದ್ದರಾಮಯ್ಯ ಅವರು ಕೇಸರಿ, ಕುಂಕುಮ ಕಂಡರೆ ಮೈಮೇಲೆ ಭೂತ ಬಂದಂತೆ ಆಡುತ್ತಿದ್ದರು. ಈಗ ಚಾಮುಂಡಿ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ದೇವರ ಮೇಲೆ ಗೌರವ, ನಂಬಿಕೆ ಇದ್ದರೇ ವಕ್ಫ್ ಆಸ್ತಿಯನ್ನು ಹಿಂದೂಗಳಿಗೆ ಕೊಡಬೇಕು' ಎಂದು ಹೇಳಿದರು.