Waqf Assets Dispute | ಸರ್ ಎಂ ವಿ ಓದಿದ ಸರ್ಕಾರಿ ಶಾಲೆಯೂ ಈಗ ವಕ್ಫ್ ಆಸ್ತಿ!
ವಕ್ಫ್ ಆಸ್ತಿ ಇಂಡೀಕರಣದ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಚಿಕ್ಕಬಳ್ಳಾಪುರ ನಗರದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಅವರು ಶಿಕ್ಷಣ ಪಡೆದಿದ್ದ ಸರ್ಕಾರಿ ಶಾಲೆಯನ್ನು ಕೂಡ ಇದೀಗ ವಕ್ಫ್ ಆಸ್ತಿ ಎಂದು ದಾಖಲೆ ತಿದ್ದುಪಡಿ ಮಾಡಲಾಗಿದೆ.;
ವಕ್ಫ್ ಬೋರ್ಡ್ ಆಸ್ತಿ ಇಂಡೀಕರಣ ವಿವಾದ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಿದೆ.
ರಾಜ್ಯದ ಹಲವು ಜಿಲ್ಲೆಗಳ ರೈತರು, ಸರ್ಕಾರಿ ಶಾಲೆ, ಕಚೇರಿಗಳು, ದೇವಸ್ಥಾನ, ಮಠ- ಮಂದಿರಗಳನ್ನು ಕೂಡ ವಕ್ಫ್ ಆಸ್ತಿ ಎಂದು ಪಹಣಿಗಳಲ್ಲಿ ದಾಖಲೆ ತಿದ್ದುಪಡಿ ಮಾಡಿ ತೆರವು ನೋಟಿಸ್ ನೀಡುತ್ತಿರುವುದು ಸ್ವತಃ ಕಾಂಗ್ರೆಸ್ ಪಕ್ಷಕ್ಕೇ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕಳೆದ ಎರಡು ವಾರಗಳಿಂದ ಪ್ರತಿನಿತ್ಯವೂ ಹೊಸ ಹೊಸ ಜಿಲ್ಲೆ, ತಾಲೂಕು, ಊರುಗಳಲ್ಲಿ ವಕ್ಫ್ ಆಸ್ತಿ ಇಂಡೀಕರಣದ ಪ್ರಕರಣಗಳು ಹೊರಬರುತ್ತಲೇ ಇವೆ. ಈ ನಡುವೆ ವಕ್ಫ್ ಆಸ್ತಿ ನೋಂದಣಿಯ ಈ ಪ್ರರಕಣಗಳ ಕುರಿತು ಮಾಹಿತಿ ಪಡೆಯಲು ಕೇಂದ್ರ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಗುರುವಾರ, ವಕ್ಫ್ ಆಸ್ತಿ ವಿವಾದ ತೀವ್ರವಾಗಿರುವ ಉತ್ತರಕರ್ನಾಟಕದ ಬೆಳಗಾವಿ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಭೇಟಿ ನೀಡಿದ್ದಾರೆ. ಜೆಪಿಸಿ ಅಧ್ಯಕ್ಷರ ಭೇಟಿ ವಿಷಯ ಕೂಡ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಈ ನಡುವೆ, ವಕ್ಫ್ ಆಸ್ತಿ ಇಂಡೀಕರಣದ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಚಿಕ್ಕಬಳ್ಳಾಪುರ ನಗರದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಅವರು ಶಿಕ್ಷಣ ಪಡೆದಿದ್ದ ಸರ್ಕಾರಿ ಶಾಲೆಯನ್ನು ಕೂಡ ಇದೀಗ ವಕ್ಫ್ ಆಸ್ತಿ ಎಂದು ದಾಖಲೆ ತಿದ್ದುಪಡಿ ಮಾಡಲಾಗಿದೆ.
ಚಿಕ್ಕಬಳ್ಳಾಪುರದ ಕಂದವಾರ ಪ್ರದೇಶದ ಸರ್ವೆ ನಂ.1ರಲ್ಲಿ 19 ಗುಂಟೆ ಸರ್ಕಾರಿ ಜಮೀನು ಇದೆ. ಈ ಜಮೀನಿನಲ್ಲೇ ನೂರಾರು ವರ್ಷಗಳಿಂದ ಸರ್ಕಾರಿ ಶಾಲೆ ಇದೆ. ಈ ಶಾಲೆಯಲ್ಲಿಯೇ ವಿಶ್ವವಿಖ್ಯಾತ ಸರ್ ಎಂ ವಿಶ್ವೇಶ್ವರಯ್ಯ ಅವರು ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಆದರೆ, ಇಂತಹ ಶಾಲೆಯನ್ನು ಕೂಡ ಇದೀಗ ವಕ್ಫ್ ಆಸ್ತಿ ಎಂದು ಪಹಣಿ ತಿದ್ದುಪಡಿ(ಇಂಡೀಕರಣ) ಮಾಡಲಾಗಿದೆ. 2018ರ ನಂತರ ಆ ಶಾಲೆಯ ಜಾಗವನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ.
ದಾವೂದ್ ಷಾ ವಲ್ಲೀ ದರ್ಗಾ ಸುನ್ನಿ ವಕ್ಫ್ ಆಸ್ತಿ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ವಾಸ್ತವವಾಗಿ ಆ ಜಮೀನು ಸರ್ಕಾರಿ ಜಮೀನಾಗಿದ್ದು, ವಕ್ಫ್ ಆಸ್ತಿಗೆ ಸಂಬಂಧಪಟ್ಟಿಲ್ಲ. ಆದರೂ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲೆ ತಿದ್ದುಪಡಿ ಮಾಡಲಾಗಿದೆ.
ಇದೀಗ ಈ ವಿಷಯ ಬೆಳಕಿಗೆ ಬಂದಿದ್ದು, ವಕ್ಫ್ ಮಂಡಳಿ ಮತ್ತು ಕಂದಾಯ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲೂ ಸರ್ಕಾರಿ ಶಾಲೆ ವಕ್ಫ್ ಆಸ್ತಿ!
ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಕೂಡ ಬುಧವಾರ ನೋಟಿಸ್ ಜಾರಿಯಾಗಿದ್ದು, ಸರ್ಕಾರಿ ಇಲಾಖೆಗಳ ಹಲವು ಕಚೇರಿಗಳ ಜಾಗವನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ವರದಿಯಾಗಿತ್ತು.
ಹಾಗೇ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೂರನಹಳ್ಳಿಯ ಹಿಂದೂ ರುದ್ರಭೂಮಿಯನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದೂ ಗ್ರಾಮಸ್ಥರು ಆರೋಪಿಸಿದ್ದರು.