Waqf Asset Dispute | ಚಿಂತಾಮಣಿಯಲ್ಲಿ ವಕ್ಫ್‌ ಆಸ್ತಿ ಗದ್ದಲ; ರೈತರ ಮೇಲೆ ಲಾಠಿ ಪ್ರಹಾರ

ತಮ್ಮ ಜಮೀನನ್ನು ವಕ್ಫ್‌ ಆಸ್ತಿ ಎಂದು ನಮೂದಿಸಿದ ಕ್ರಮ ಖಂಡಿಸಿ ಭೂಮಿ ಉಳುಮೆಗೆ ಯತ್ನಿಸಿದ ರೈತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ

Update: 2024-11-15 08:36 GMT

ರೈತರಿಗೆ ನೀಡಿರುವ ವಕ್ಫ್ ನೋಟಿಸ್ ಹಿಂಪಡೆದು, ಪಹಣಿ ತಿದ್ದುಪಡಿ ಸರಿಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸರ್.ಎಂ. ವಿಶ್ವೇಶ್ವರಯ್ಯ ಓದಿದ ಶಾಲೆಯ ಆಸ್ತಿ ವಿವಾದ ಬಗೆಹರಿದ ಬೆನ್ನಲ್ಲೇ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ವಿವಾದ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ವಕ್ಫ್ ಆಸ್ತಿ ಎಂದು ನಮೂದಾಗಿರುವ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಏನಿದು ಘಟನೆ?

ತಿಮ್ಮಸಂದ್ರ ಗ್ರಾಮದ ರೈತರಾದ ಟಿ.ಎನ್ ಬೈರಾರೆಡ್ಡಿ, ಎನ್.ಮುನಿರೆಡ್ಡಿ, ಎನ್ ಚನ್ನಕೃಷ್ಣಪ್ಪ, ಲಕ್ಷ್ಮಿದೇವಮ್ಮ, ನಾರಾಯಣಪ್ಪ, ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ನಾಗಮ್ಮ, ಕೆ.ಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ ಸೇರಿ 10ಕ್ಕೂ ಹೆಚ್ಚು ರೈತರು ಸರ್ವೆ ನಂ. 13/1ರಲ್ಲಿ 2 ಎಕರೆ 21 ಗುಂಟೆ, 13/3 ರಲ್ಲಿ 20 ಗುಂಟೆ, ಸರ್ವೆ ನಂಬರ್ 20ರಲ್ಲಿ 1 ಎಕರೆ 36 ಗುಂಟೆ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದರು.

ಇತ್ತೀಚೆಗೆ ಆ ಸರ್ವೆ ನಂಬರುಗಳಲ್ಲಿ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ರೈತರಲ್ಲಿ ಆತಂಕ ಮೂಡಿಸಿತ್ತು. ಆಕ್ರೋಶಗೊಂಡ ರೈತರು ಚಿಂತಾಮಣಿ ಜಾಮಿಯಾ ಮಸೀದಿ ಸದಸ್ಯರು ಮತ್ತು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಬಳಿಕ ರೈತರು ಜಮೀನುಗಳಲ್ಲಿ ಉಳುಮೆ ಮಾಡಲು ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಚದುರಿಸಿದರು. ಅಲ್ಲದೆ ರೈತರ ಟ್ಟ್ರ್ಯಾಕ್ಟರುಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳು ರೈತರ ಮೇಲೆ ಲಾರಿ ಪ್ರಹಾರ ನಡೆಸಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ರೈತರ ಮೇಲೆ ದೂರು ದಾಖಲು

ವಕ್ಫ್ ಆಸ್ತಿ ಎಂದು ನಮೂದಿಸಿದ ಜಮೀನುಗಳಲ್ಲಿ ಉಳುಮೆಗೆ ಮುಂದಾದ ರೈತರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಚಿಂತಾಮಣಿ ಜಾಮಿಯಾ ಮಸೀದಿ ಕಾರ್ಯದರ್ಶಿ ದೂರಿನ ಆಧಾರದ ಮೇಲೆ 10 ಮಂದಿ ರೈತರ ವಿರುದ್ಧ ಬಿಎನ್ಎಸ್ ಸೆಕ್ಷನ್ 324(4), 329(3)ರಡಿ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಇದೇ ವೇಳೆ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ.ಖಾಸಿಂ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ವಾರವಷ್ಟೇ ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಓದಿದ ಸರ್ಕಾರಿ ಶಾಲೆಯನ್ನೇ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಪಹಣಿ ತಿದ್ದುಪಡಿಗೆ ಆದೇಶಿಸಿ, ಸರಿಪಡಿಸಿದ್ದರು.

Tags:    

Similar News