ಮತದಾರರ ಪಟ್ಟಿ ಅಕ್ರಮ: ಸಚಿವ ರಾಜಣ್ಣ ಹೇಳಿಕೆಯಿಂದ ಕಾಂಗ್ರೆಸ್ಗೆ ಮುಜುಗರ, ಸುರ್ಜೇವಾಲಾಗೆ ದೂರು
"ಮತದಾರರ ಪಟ್ಟಿಯು ಸಿದ್ಧವಾಗಿದ್ದು ನಮ್ಮ (ಕಾಂಗ್ರೆಸ್) ಸರ್ಕಾರದ ಅವಧಿಯಲ್ಲೇ. ಆಗ ಯಾಕೆ ಸುಮ್ಮನಿದ್ದರು?" ಎಂದು ಸಚಿವ ರಾಜಣ್ಣ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯು ಇದೀಗ ಸ್ವಪಕ್ಷದಲ್ಲೇ ತೀವ್ರ ವಿವಾದಕ್ಕೆ ಕಾರಣವಾಗಿದೆ.;
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಸಚಿವ ಕೆ.ಎನ್. ರಾಜಣ್ಣ
ಮತದಾರರ ಪಟ್ಟಿ ಅಕ್ರಮದ (Voter List Scam) ಕುರಿತು ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರು ಸಲ್ಲಿಸಿದೆ.
"ಮತದಾರರ ಪಟ್ಟಿಯು ಸಿದ್ಧವಾಗಿದ್ದು ನಮ್ಮ (ಕಾಂಗ್ರೆಸ್) ಸರ್ಕಾರದ ಅವಧಿಯಲ್ಲೇ. ಆಗ ಯಾಕೆ ಸುಮ್ಮನಿದ್ದರು?" ಎಂದು ಸಚಿವ ರಾಜಣ್ಣ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯು ಇದೀಗ ಸ್ವಪಕ್ಷದಲ್ಲೇ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯು 'ಮತಗಳ್ಳತನ'ದ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸಿದ ಬೃಹತ್ ಹೋರಾಟವನ್ನೇ ಪ್ರಶ್ನಿಸುವಂತಿದೆ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿದೆ.
"ಸಚಿವರ ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಪಕ್ಷದ ನಾಯಕರಿಗೆ ತೀವ್ರ ಮುಜುಗರ ಉಂಟಾಗಿದೆ. ಸ್ವತಃ ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದು ಮತಗಳ್ಳತನದ ವಿರುದ್ಧ ಧ್ವನಿ ಎತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಾವಿರಾರು ಸಚಿವರು ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ, ಸಚಿವ ರಾಜಣ್ಣ ಅವರು ಈ ಹೋರಾಟದ ಗಂಭೀರತೆಯನ್ನೇ ಪ್ರಶ್ನಿಸುವ ಮೂಲಕ ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಪಕ್ಷದಿಂದ ಅಮಾನತುಗೊಳಿಸಬೇಕು" ಎಂದು ಪ್ರಚಾರ ಸಮಿತಿಯ ಅಧ್ಯಕ್ಷರು ಮತ್ತು ಇತರ ಕಾರ್ಯಕರ್ತರು ಸಹಿ ಮಾಡಿದ ಪತ್ರದಲ್ಲಿ ಒತ್ತಾಯಿಸಿದ್ದಾರೆ.