ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ರಾಷ್ಟ್ರಮಟ್ಟದಲ್ಲಿ ಒಬಿಸಿಗಳು: ಡಿಸಿಎಂ ಡಿ.ಕೆ. ಶಿವಕುಮಾರ್

ಸಮಾಜದಲ್ಲಿ ಹಿಂದುಳಿದ ವರ್ಗಗಳ ಜನರನ್ನು ಮುನ್ನೆಲೆಗೆ ತರುವ ಉದ್ದೇಶದಿಂದಲೇ ಒಬಿಸಿ ಸಲಹಾ ಸಮಿತಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.;

Update: 2025-07-06 12:51 GMT

ದೇಶದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಂಖ್ಯೆ ದೊಡ್ಡದಾಗಿದ್ದು, ಒಕ್ಕಲಿಗರು ಮತ್ತು ಲಿಂಗಾಯತರು ಕೂಡ ರಾಷ್ಟ್ರಮಟ್ಟದಲ್ಲಿ ಒಬಿಸಿ ವರ್ಗಕ್ಕೆ ಸೇರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಮಾಜದಲ್ಲಿ ಹಿಂದುಳಿದ ವರ್ಗಗಳ ಜನರನ್ನು ಮುನ್ನೆಲೆಗೆ ತರುವ ಉದ್ದೇಶದಿಂದಲೇ ಒಬಿಸಿ ಸಲಹಾ ಸಮಿತಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಭಾನುವಾರ ಕನಕಪುರದ ಬಿಜ್ಜಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಪಕ್ಷದ ಒಬಿಸಿ ಸಲಹಾ ಮಂಡಳಿಗೆ ಜವಾಬ್ದಾರಿ ನೀಡಲಾಗಿದೆ ಎಂಬ ಬಿಜೆಪಿ ಟೀಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, "ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು ಸೇರಿದಂತೆ ಅನೇಕ ಘಟಕಗಳಿವೆ. ಅಲ್ಪಸಂಖ್ಯಾತರಲ್ಲಿ ಜೈನರು, ಸಿಖ್ ಧರ್ಮದವರೂ ಸೇರುತ್ತಾರೆ. ಇವೆಲ್ಲವನ್ನೂ ಬಿಜೆಪಿ ಟೀಕೆ ಮಾಡಲಿಲ್ಲ ಎಂದರೆ ಅವರಿಗೆ ಸಮಾಧಾನವಾಗಬೇಕಲ್ಲವೇ? ಟೀಕೆಗಳು ಸಾಯುತ್ತವೆ, ಆದರೆ ಕೆಲಸಗಳು ಉಳಿಯುತ್ತವೆ" ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದರಿಂದ, ಪಕ್ಷದ ಒಬಿಸಿ ಸಲಹಾ ಮಂಡಳಿಯ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲೇ ನಡೆಸಲು ತಾನು ಸಲಹೆ ನೀಡಿದ್ದಾಗಿ ಶಿವಕುಮಾರ್ ತಿಳಿಸಿದರು. "ಅದರಂತೆ ಇಲ್ಲಿ ಸಭೆ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ರಾಷ್ಟ್ರಮಟ್ಟದ 40ಕ್ಕೂ ಹೆಚ್ಚು ನಾಯಕರು ಭಾಗವಹಿಸಲಿದ್ದಾರೆ" ಎಂದು ಅವರು ಮಾಹಿತಿ ನೀಡಿದರು. 

Tags:    

Similar News