Channapatna By-Election | ನಿಖಿಲ್ ರೋಡ್ ಷೋನಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಬಸ್ ಮಾಲೀಕರಿಗೆ ನೋಟಿಸ್
ನಿಖಿಲ್ ಕುಮಾರಸ್ವಾಮಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ಆಯೋಜಕರಿಗೆ ನೋಟಿಸ್ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ಆಯೋಜಕರಿಗೆ ನೋಟಿಸ್ ನೀಡಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದು, ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆದ ರೋಡ್ ಷೋ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸುಮಾರು 96 ಬಸ್‌ಗಳಲ್ಲಿ ಜನರನ್ನು ಕರೆತರಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ಬಸ್‌ಗಳಿಗೆ ಅನುಮತಿ ಪಡೆಯದೇ ಇರುವುದು ಕಂಡುಬಂತು. ಹಾಗಾಗಿ, ಆಯೋಜಕರು ಹಾಗೂ ಬಸ್‌ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಕುರಿತು ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ಕೂಡ ಮಾಡಿಕೊಳ್ಳಲಾಗಿದೆ. ಶನಿವಾರ ನ್ಯಾಯಾಲಯದ ಅನುಮತಿ ಪಡೆದು, ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಕುರಿತು ಆಯೋಜಕರಿಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು, ನೋಟಿಸ್ ಕುರಿತು ಬೆಂಗಳೂರಿನಲ್ಲಿ ಜೆಡಿಎಸ್‌ನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, 'ಕಾಂಗ್ರೆಸ್ ಸರ್ಕಾರದಿಂದ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ' ಎಂದು ಟೀಕಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದು, 'ಬಸ್ಸುಗಳಲ್ಲಿ ಜನರನ್ನು ಕರೆದುಕೊಂಡು ಬರಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದು, ಲೆಕ್ಕ ಕೊಡಬೇಕು ಎಂಬ ಸಾಮಾನ್ಯ ಜ್ಞಾನ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಇಲ್ಲವೆ? ಅಷ್ಟೂ ಗೊತ್ತಿಲ್ಲದೆ ಹೇಗೆ ಕೇಂದ್ರ ಸಚಿವರಾದರು? ಗೊಲ್ಲದಿದ್ದರೆ ಪ್ರಧಾನಿ ಮೋದಿಯನ್ನು ಕೇಳಿ ತಿಳಿದುಕೊಳ್ಳಲಿ' ಎಂದು ವ್ಯಂಗ್ಯವಾಡಿದ್ದಾರೆ.
'ಕುಮಾರಸ್ವಾಮಿ ಹಲವು ಚುನಾವಣೆಗಳನ್ನು ಮಾಡಿದ್ದಾರೆ. ನೀತಿ ಸಂಹಿತೆ ಹಾಗೂ ಯಾರ ಪಾತ್ರ ಏನೇನು ಎಂಬುದರ ಅರಿವಿದೆ. ಉಲ್ಲಂಘನೆ ಆಗಿದ್ದರೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಅವರ ಕರ್ತವ್ಯ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಆದರೆ, ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ದಿನಾ ಬೆಳಿಗ್ಗೆ ದೂಷಿಸುತ್ತಾರೆ' ಎಂದು ಕಿಡಿಕಾರಿದರು.
'ಯೋಗೇಶ್ವರ್ 9 ಚುನಾವಣೆ ಎದುರಿಸಿ, 5 ಸಲ ಶಾಸಕರಾಗಿ 2 ಸಲ ಸಚಿವರಾಗಿದ್ದವರು. ಕುಮಾರಸ್ವಾಮಿ ತಮ್ಮ ಪುತ್ರನನ್ನು ಉಪ ಚುನಾವಣೆಗೆ ನಿಲ್ಲಿಸುವುದಕ್ಕಾಗಿ, ಬಿಜೆಪಿ ಜೊತೆಗೂಡಿ ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಹೊರಹಾಕಿದರು. ನಾವೇನೂ ಷಡ್ಯಂತ್ರ ಮಾಡಿಲ್ಲ. ಮಾಡುತ್ತಿರುವುದು ಅವರೇ. ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಅವರು ಹೋಗಿದ್ದು ಷಡ್ಯಂತ್ರವೇ?' ಎಂದು ಪ್ರಶ್ನಿಸಿದರು.