ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ: ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡ ತೆನ್ನಿರ ಮೈನಾ
ಆತ್ಮಹತ್ಯೆಗೂ ಮುನ್ನ ಬರೆದ ಪೋಸ್ಟ್ನಲ್ಲಿ , ತೆನ್ನಿರ ಮೈನಾ ಮತ್ತು ವಿರಾಜಪೇಟೆ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಸೇರಿದಂತೆ ಕೆಲವರನ್ನು ತಮ್ಮ ಸಾವಿಗೆ ಕಾರಣ ಎಂದು ಆರೋಪಿಸಿದ್ದರು.;
ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೆಣ್ಣೂರು ಠಾಣೆ ಪೊಲೀಸರು ತೆನ್ನಿರ ಮೈನಾ ಅವರಿಗೆ ತನಿಖೆಗೆ ಹಾಜರಾಗುವಂತೆ ಹೇಳಿದ್ದರೂ ಅವರು ತಲೆ ಮರೆಸಿಕೊಂಡಿದ್ದಾರೆ.
ವಿನಯ್ ಸೋಮಯ್ಯ (35) ಅವರು ಏಪ್ರಿಲ್ 4ರಂದು ಬೆಂಗಳೂರಿನ ನಾಗವಾರದ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ, ತೆನ್ನಿರ ಮೈನಾ ಮತ್ತು ವಿರಾಜಪೇಟೆ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಸೇರಿದಂತೆ ಕೆಲವರು ತಮ್ಮ ಸಾವಿಗೆ ಕಾರಣ ಎಂದು ಆರೋಪಿಸಿದ್ದರು.
ಆತ್ಮಹತ್ಯೆ ಯಾಕೆ?
ಬಿಜೆಪಿ ಕಾರ್ಯಕರ್ತ ವಿನಯ್ ಅವರು "ಕೊಡಗಿನ ಸಮಸ್ಯೆಗಳು" ಎಂಬ ವಾಟ್ಸ್ಆ್ಯಪ್ ಗ್ರೂಪ್ನ ಅಡ್ಮಿನ್ ಆಗಿದ್ದರು. ಈ ಗ್ರೂಪ್ನಲ್ಲಿ ಶಾಸಕ ಪೊನ್ನಣ್ಣ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಒಂದು ಶೇರ್ ಮಾಡಲಾಗಿತ್ತು. ಈ ಬಗ್ಗೆ ತೆನ್ನಿರ ಮೈನಾ ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಅಡ್ಮಿನ್ ವಿನಯ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಂಧನಕ್ಕೆ ಒಳಗಾಗಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಮೈನಾ ವಿರುದ್ಧ ನೇರ ಆರೋಪ
ಆತ್ಮಹತ್ಯೆಗೆ ಮೊದಲು ವಿನಯ್ ಹಾಕಿದ ಪೋಸ್ಟ್ನಲ್ಲಿ, ಮೈನಾ ವಿರುದ್ಧ ನೇರ ಆರೋಪ ಮಾಡಲಾಗಿದೆ. ರಾಜಕೀಯ ದ್ವೇಷದಿಂದ ಕೂಡಿದ ಎಫ್‌ಐಆರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಅವಮಾನಿಸಲಾಗಿದೆ ಎಂದು ದೂಷಿಸಿದ್ದರು. ಆತ್ಮಹತ್ಯೆ ಘಟನೆ ರಾಜಕೀಯ ಗೊಂದಲಕ್ಕೆ ಕಾರಣವಾಗಿದ್ದು, ಬಿಜೆಪಿ ಕಾರ್ಯಕರ್ತರು ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದರು.
ಪೊಲೀಸರು ತೆನ್ನಿರ ಮೈನಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108(1)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡುವುದಕ್ಕೆ ಸಂಬಂಧಿಸಿದೆ. ಆ ಬಳಿಕದಿಂದ ತೆನ್ನಿರ ಮೈನಾ ತಮ್ಮ ಮನೆಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆತನ ಸಂಬಂಧಿಕರು ಮತ್ತು ಸ್ನೇಹಿತರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಶಾಸಕ ಪೊನ್ನಣ್ಣ ಹೇಳುವುದೇನು?
ಶಾಸಕ ಎ.ಎಸ್. ಪೊನ್ನಣ್ಣ, ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ಯಾರಿಗೂ ದೂರು ನೀಡಲು ಸೂಚಿಸಿಲ್ಲ, ವಿನಯ್ ಅವರನ್ನು ಭೇಟಿಯಾಗಿಯೂ ಇಲ್ಲ. ಬಿಜೆಪಿ ನಾಯಕರು ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ,'' ಎಂದು ಆರೋಪಿಸಿದ್ದಾರೆ.