ಬೀದರ್ ಗುತ್ತಿಗೆದಾರ ಆತ್ಮಹತ್ಯೆ | ಸಿಬಿಐಗೆ ನೀಡದಿದ್ದರೆ ಬೃಹತ್ ಹೋರಾಟ: ಬಿವೈ ವಿಜಯೇಂದ್ರ ಎಚ್ಚರಿಕೆ
ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು, ಸಚಿನ್ ಪಾಂಚಾಳ್ ಡೆತ್ ನೋಟ್ನಲ್ಲಿ ಆಂದೋಲಾ ಸ್ವಾಮೀಜಿ ಸೇರಿದಂತೆ ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲು ಸೊಲ್ಲಾಪುರದ ಸುಪಾರಿ ಕಿಲ್ಲರ್ಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬ ಅಂಶವೂ ಉಲ್ಲೇಖವಾಗಿದೆ ಎಂದರು
ಬೀದರ್‌ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಚಿನ್ ಪಾಂಚಾಳ್ ಡೆತ್ ನೋಟ್ನಲ್ಲಿ ಆಂದೋಲಾ ಸ್ವಾಮೀಜಿ ಸೇರಿದಂತೆ ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲು ಸೊಲ್ಲಾಪುರದ ಸುಪಾರಿ ಕಿಲ್ಲರ್ಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬ ಅಂಶವೂ ಉಲ್ಲೇಖವಾಗಿದೆ. ಇದು ಬಹಳ ಗಂಭೀರ ವಿಷಯ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿಸಬೇಕು. ಜನವರಿ 3 ರವರೆಗೂ ಕಾಯುತ್ತೇವೆ. ಸಿಬಿಐಗೆ ನೀಡದೇ ಇದ್ದರೆ ಜ.4 ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಆತ್ಮಹತ್ಯೆ ಪ್ರಕರಣ ಹೆಚ್ಚು
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ, ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯ ಹಿಂದೆಂದೂ ನೋಡಿರಲಿಲ್ಲ ಎಂದು ಆರೋಪಿಸಿರುವ ಅವರು, ಸಚಿನ್ ಸಹೋದರಿಯರು ಆತ್ಮಹತ್ಯೆಯ ಮುನ್ನ ಸಚಿನ್ ಸ್ಟೇಟಸ್ ನೋಡಿ ಪೊಲೀಸ್ ಠಾಣೆಗೆ ಹೋಗಿ ಫೋನ್ ಟ್ರಾಟ್ ಮಾಡಿ ಜೀವ ಉಳಿಸಲು ಮನವಿ ಮಾಡಿದ್ದರೂ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದರು.
ಸಹೋದರಿಯರು ದೂರು ಕೊಡಲು ಹೋದಾಗ 12 ಗಂಟೆಗಳ ಕಾಲ ಪೊಲೀಸರು ಏನೂ ತಲೆಕೆಡಿಸಿಕೊಂಡಿಲ್ಲ, ಹೆಣ್ಣುಮಕ್ಕಳಿಗೆ ಹೀಯಾಳಿಸಿ ಅಪಮಾನ ಮಾಡಿ ಪೊಲೀಸರು ನಿಂದಿಸಿದ್ದಾರೆ. ಸರ್ಕಾರ ಸಚಿನ್ ಕುಟುಂಬಕ್ಕೆ ಅಗತ್ಯ ಭದ್ರತೆ ನೀಡಬೇಕು. ಮೃತ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ನಡೆಯುತ್ತಿವೆ. ಸರ್ಕಾರದ ಕುಮ್ಮಕ್ಕಿನಿಂದ ಆತ್ಮಹತ್ಯೆಗಳು ದಿನೇ ದಿನೇ ಹೆಚ್ಚಳವಾಗಿವೆ. ಸರ್ಕಾರ, ಸಚಿವರ ಕುಮ್ಮಕ್ಕು, ಕಾಂಗ್ರೆಸ್ ಶಾಸಕ ಕುಮ್ಮಕ್ಕಿನಿಂದ ಆತ್ಮಹತ್ಯೆಗಳು ನಡೀತಿವೆ. ಹಿಂದೆಂದೂ ಹೀಗೆ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ನಾವು ನೋಡಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ ಆತ್ಮಹತ್ಯೆ ಭಾಗ್ಯ ದಯಪಾಲಿಸಿದೆ
ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳ ಜೊತೆಗೆ ಆತ್ಮಹತ್ಯೆಯ ಭಾಗ್ಯವನ್ನೂ ದಯಪಾಲಿಸಿದೆ. ಮೊದಲ ಆತ್ಮಹತ್ಯೆ ವಾಲ್ಮೀಕಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್, ಮೇ 24 ರಂದು ಆತ್ಮಹತ್ಯೆ ಮಾಡಿಕೊಂಡರು. ನವೆಂಬರ್ 04 ರಂದು ರುದ್ರಣ್ಣ ಯಡವಣ್ಣವರ್ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರನೇ ಪ್ರಕರಣ ದಾವಣಗೆರೆಯಲ್ಲಿ, ಗುತ್ತಿಗೆ ಸಿಗದೇ ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಮಾಡಿಕೊಂಡರು. ಯಾದಗಿರಿ ಠಾಣೆ ಪಿಎಸ್ಐ ಪರಶುರಾಮ್, ಸ್ಥಳೀಯ ಶಾಸಕರ ಪುತ್ರನ ಒತ್ತಡ ತಡೆಯದೇ ಆತ್ಮಹತ್ಯೆ, ಈಗ ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ರಾಜು ಕಪನೂರು ಅವರು, ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಆರೋಪಿ ಇದ್ದ ಫೋಟೋವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಬಿವೈ ವಿಜಯೇಂದ್ರ ಅವರು, ಸಚಿನ್ ಬರೆದಿರುವ ಪತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರ ಸ್ಪಷ್ಟವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ
ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ, ಕಲಬುರಗಿ ಜಿಲ್ಲೆ ಯಾರ ಕಪಿಮುಷ್ಠಿಯಲ್ಲಿದೆ ಎಂದು ಬಸ್ ನಿಲ್ದಾಣದಲ್ಲಿ ನಿಂತು ಕೇಳಿದರೂ ಹೇಳುತ್ತಾರೆ ಎಂದರು.
ಕಾಂಗ್ರೆಸ್ನವರು ಬೆಳಗಿನ ಜಾವ 2-3 ಗಂಟೆಗೆ ಸಚಿನ್ ಕುಟುಂಬದವರನ್ನು ಭೇಟಿ ಮಾಡುತ್ತಾರೆ, ಕಾಂಗ್ರೆಸ್ನವರು ಹಗಲು ಕಾರ್ಯಾಚರಣೆ ಮಾಡುವುದಿಲ್ಲ. ಕುಟುಂಬಕ್ಕೆ ಸಮಾಧಾನ ಮಾಡಿ ಆಗದಿದ್ದರೆ ಬೆದರಿಕೆ ಹಾಕುತ್ತಾರೆ, ಇಡಿ ಕಲಬುರಗಿ ಜಿಲ್ಲೆಯ ಪೊಲೀಸ್ ಖರ್ಗೆ ಕುಟುಂಬದ ಹಿಡಿತದಲ್ಲಿದೆ ಎಂದರು.
ಇದೇ 27ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರು ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಕಿರುಕುಳದ ಉಲ್ಲೇಖವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ. ನಿನ್ನೆ ನಾನು, ವಿಪಕ್ಷ ನಾಯಕರು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು, ಭಾಲ್ಕಿ ತಾಲ್ಲೂಕಿನ ಮೃತರ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇವೆ. ಸಚಿನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಆ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಸಚಿನ್‍ಗೆ 5 ಜನರು ಸಹೋದರಿಯರಿದ್ದಾರೆ. ಬಿಜೆಪಿಯವರಿಗೆ ರಾಜಕೀಯ ತೆವಲು, ಚಟ, ಹಿಟ್ ಆಂಡ್ ರನ್ ಎಂದು ಕಾಂಗ್ರೆಸ್ಸಿನವರು ಮಾತನಾಡುತ್ತಾರೆ ಎಂದರು.
ಕುಟುಂಬದ ಆಧಾರಸ್ತಂಭ ಕುಸಿದಿದೆ
ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಬಡ ಕುಟುಂಬಕ್ಕೆ ಅನ್ಯಾಯವಾಗಿದೆ. ಕುಟುಂಬದ ಆಧಾರಸ್ತಂಭ ಕುಸಿದಿದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ನಾವು ಒತ್ತಾಯಿಸುತ್ತಿದ್ದೇವೆ. ದೆಹಲಿಯಲ್ಲಿ ಪ್ರಮುಖ ಸಭೆ ಇದ್ದರೂ ಇಲ್ಲಿ ಬಂದಿದ್ದೇನೆ. ಭಾಲ್ಕಿಗೆ ಹೋಗಿ ಬಂದಿದ್ದೇವೆ ಎಂದ ಅವರು, ರಾಜು ಕಪನೂರ್, ಖರ್ಗೆ ಕುಟುಂಬಕ್ಕೆ ಪರಮಾಪ್ತ. ಬಡ ಸಚಿನ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಇಚ್ಛೆ ನಮ್ಮದು ಎಂದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯ
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಪ್ರಿಯಾಂಕ್ ಖರ್ಗೆ ಇಲಾಖೆ ಕೇವಲ ಗ್ರಾಮೀಣಾಭಿವೃದ್ಧಿ, ಐಟಿಬಿಟಿ ಅಷ್ಟೇ ಅಲ್ಲ ಪ್ರಿಯಾಂಕ್ ಖರ್ಗೆ ಸರ್ವ ಇಲಾಖೆಗೂ ಮಂತ್ರಿ. ಸದನದಲ್ಲಿ ಎಲ್ಲಾ ಇಲಾಖೆಗಳ ಪ್ರಶ್ನೆಗೂ ಎದ್ದು ಎದ್ದು ಉತ್ತರ ಕೊಡುತ್ತಾರೆ. ಅವರು ಬಹಳ ದೊಡ್ಡ ಜ್ಞಾನಿ, ಪ್ರಭಾವಿ. ಬಿಜೆಪಿಯವರಿಗೆ ಆರೋಪ ಮಾಡುವ ಚಟ ಎಂದು ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಪೋಕ್ಸೋ ಕೇಸ್ ನಿಂದ ಡೈವರ್ಟ್ ಮಾಡಲು ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನೀವೇನು ಹೈಕೋರ್ಟಾ? ಸುಪ್ರೀಂಕೋರ್ಟಾ? ಯಡಿಯೂರಪ್ಪ ಬಗ್ಗೆ ನೀವೇನು ಮಾತಾಡೋದು? ನಿಮ್ಮ ಆಪ್ತನ ಕುಮ್ಮಕ್ಕಿನಿಂದಲೇ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿ ಎಂಟು ಮಂದಿ ಜೀವ ಬೆದರಿಕೆ ಹಾಕಿರುವ ಕುರಿತು ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಬಿಜೆಪಿ ಪರಸ್ವರ ವಾಕ್ಸಮರ ಭುಗಿಲೆದ್ದಿದೆ.