KAS Exam | ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದ ಬಿ.ವೈ.ವಿಜಯೇಂದ್ರ
ಕರ್ನಾಟಕ ಲೋಕಸೇವಾ ಆಯೋಗವು ಆಗಸ್ಟ್ 27 ರಂದು 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಎರಡು ಪತ್ರಿಕೆಗಳಿಂದ ಎಂಬತ್ತಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಭಾಷಾಂತರ ದೋಷಗಳಾಗಿದ್ದವು. ಇದರಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಮರು ಪರೀಕ್ಷೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.;
ಪ್ರತಿಪಕ್ಷದ ನಾಯಕ ಬಿ.ವೈ. ವಿಜಯೇಂದ್ರ ಕೆಎಎಸ್ ಮರು ಪರೀಕ್ಷೆ ನಡೆಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪತ್ರ ಬರೆದಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗವು ಆಗಸ್ಟ್ 27 ರಂದು 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಎರಡು ಪತ್ರಿಕೆಗಳಿಂದ ಎಪ್ಪತೊಂಬತ್ತಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಭಾಷಾಂತರ ದೋಷಗಳಾಗಿದ್ದವು. ಈ ಸಂದರ್ಭದಲ್ಲಿ ಹಲವಾರು ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ ಎರಡು ತಿಂಗಳೊಳಗೆ ಮರು ಪರೀಕ್ಷೆ ನಡೆಸಲು ಆದೇಶ ನೀಡಿದ್ದರು.
ಸಿಎಂ ಸೂಚನೆ ಹಿನ್ನೆಲೆ ಡಿ.29 ರಂದು ಕೆಪಿಎಸ್‌ಸಿ ಮರು ಪರೀಕ್ಷೆ ನಡೆಸಿತ್ತು. ಮರು ಪರೀಕ್ಷೆಯಲ್ಲೂ ಹಲವಾರು ತಪ್ಪುಗಳಾಗಿದ್ದು, ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು, ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗರರು ಪ್ರತಿಭಟನೆ ನಡೆಸಿದ್ದರು.
ವಿಧಾನಸಭೆ ಅಧಿವೇಶನದಲ್ಲೂ ಚರ್ಚೆ
ಕೆಎಎಸ್ ಮರು ಪರೀಕ್ಷೆ ನಡೆಸಬೇಕು. ಇಲ್ಲವೇ ಪೂರ್ವಭಾವಿ ಪರೀಕ್ಷೆ ಬರೆದ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಬಜೆಟ್ ಅಧಿವೇಶನದಲ್ಲಿ ವಿರೋಧಪಕ್ಷಗಳು ಆಗ್ರಹಿಸಿದ್ದವು. ಕಾಂಗ್ರೆಸ್ ಶಾಸಕರೂ ಧ್ವನಿಗೂಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರುಪರೀಕ್ಷೆ ಕುರಿತು ಮಾತನಾಡಿ "ಕೆಎಎಸ್ ಮರು ಪರೀಕ್ಷೆ ವಿಚಾರ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಸರ್ವಪಕ್ಷಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ" ಎಂದು ಭರವಸೆ ನೀಡಿದ್ದರು.
ಕೆಎಎಸ್ ಮರು ಪರೀಕ್ಷೆಗೆ ಸಂಬಂಧಿಸಿ ಕೆಎಟಿ ಮುಖ್ಯಪರೀಕ್ಷೆ ನಡೆಸಲು ಕೆಪಿಎಸ್‌ಸಿಗೆ ಸೂಚನೆ ನೀಡಿತ್ತು. ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಅರ್ಜಿ ಸಲ್ಲಿಸಿದ್ದ 36 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೆಪಿಎಸ್‌ಸಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆಗೆ ಅವಕಾಶ ನೀಡಿದ್ದು, ಉಳಿದವರಿಗೆ ಅನ್ಯಾಯವಾಗಿದೆ. ಆದ್ದರಿಂದ ಕೆಎಎಸ್ ಮರು ಪರೀಕ್ಷೆ ನಡೆಸಬೇಕೆಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.