ಕೊಳವೆ ಬಾವಿ ದುರಂತ | ರಕ್ಷಣಾ ಕಾರ್ಯಾಚರಣೆ ಯಶಸ್ವಿ: ಸಾವು ಗೆದ್ದ ಸಾತ್ವಿಕ್
ವಿಜಯಪುರ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದ ಮಗುವನ್ನು ಸತತ 20 ಗಂಟೆಗಳ ಕಾರ್ಯಾಚರಣೆಯ ಬಳಿಕ ಜೀವಂತವಾಗಿ ಹೊರ ತರಲಾಗಿದೆ.;
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗುವಿನ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮಗುವನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಮಗುವನ್ನು ಹೊರ ತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಸಂಜೆ ವೇಳೆಗೆ ಸಾತ್ವಿಕ್ ಮುಜಗೊಂಡ ಎಂಬ ಮಗು ಕೊಳವೆ ಬಾವಿಗೆ ಬಿದ್ದು, 20 ಗಂಟೆಗಳಿಂದ ಅನ್ನ ನೀರು ಇಲ್ಲದೆ ಬಾವಿಯೊಳಗೆ ಸಿಲುಕಿಕೊಂಡಿತ್ತು. 20 ಗಂಟೆಗಳ ಕಾಲ ಸುದೀರ್ಘ ಗಂಟೆಗಳ ಕಾರ್ಯಾಚರಣೆ ನಡೆಸಿದ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡವು ಮಗುವನ್ನು ಜೀವಂತವಾಗಿ ಹೊರತೆಗೆದಿದೆ.
ಕೊಳವೆ ಬಾವಿಗೆ ಮಗು ಬಿದ್ದ ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ನಂತರ ಬಂದ ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡವು ನಿರಂತರ ಗಂಟೆಗಳ ಕಾಲ ಪರಿಶ್ರಮ ನಡೆಸಿದ್ದು, ರಕ್ಷಣಾ ತಂಡಗಳ ಜಂಟಿ ಪ್ರಯತ್ನವು ಯಶಸ್ವಿ ಕಂಡಿದೆ.
ಮಗುವಿನ ಚಲನವಲನ ಪರಿಶೀಲಿಸಿದಾಗ ಮಗು ಕಾಲು ಅಲ್ಲಾಡಿಸುತ್ತಿರುವುದು ಕಂಡು ಬಂದಿತ್ತು. ತಕ್ಷಣವೇ ಮಗುವಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯದಲ್ಲಿ ಇದುವರೆಗೂ ಒಟ್ಟು 8 ಕೊಳವೆ ಬಾವಿ ದುರಂತಗಳು ಸಂಭವಿಸಿದ್ದು, ಅದರಲ್ಲಿ ಈವರೆಗೆ ಒಂದು ಪ್ರಕರಣದಲ್ಲಿ ಮಾತ್ರ ಯಶಸ್ವಿ ಕಾರ್ಯಾಚರಣೆ ನಡೆದಿತ್ತು . 2006ರಲ್ಲಿ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಕಲ್ಲವ್ವ ಎಂಬ ಮಹಿಳೆಯನ್ನು ರಕ್ಷಿಸಲಾಗಿತ್ತು.