ಧರ್ಮಸ್ಥಳ ಪ್ರಕರಣ | ಸರಣಿ ಹತ್ಯೆ ಆರೋಪ ಆಧಾರರಹಿತ- ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ ವಿರುದ್ಧದ ಆರೋಪಗಳು ಸುಳ್ಳೆಂದು ಸಾಬೀತಾದರೆ ಅಪಪ್ರಚಾರಕ್ಕೆ ಕೊನೆಹಾಡಿದಂತಾಗುತ್ತದೆ. ಎಲ್ಲವನ್ನೂ ಸಾಬೀತುಪಡಿಸುವುದು ಎಸ್ಐಟಿ ಜವಾಬ್ದಾರಿ ಎಂದು ವಿರೇಂದ್ರ ಹೆಗ್ಗಡೆಯವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.;
ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ, ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪದ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿರುವ ಹಾಗೂ ಕಳೆದ ಕೆಲವು ದಿನಗಳಿಂದ ವಿಧಾನಸಭೆ ಉಭಯ ಸದನಗಳಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಪ್ರಕರಣದ ಕುರಿತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೊನೆಗೂ ಮೌನ ಮುರಿದಿದ್ದಾರೆ.
ಸೌಜನ್ಯ ಪ್ರಕರಣ ಮತ್ತು ಕಳೆದ ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಬಹುಹತ್ಯೆ, ಅತ್ಯಾಚಾರ, ಶವಗಳನ್ನು ಹೂತುಹಾಕಿದ ಪ್ರಕರಣಗಳ ಆರೋಪಗಳನ್ನು “ಆಧಾರರಹಿತ ಮತ್ತು ಸುಳ್ಳು” ಎಂದಿರುವ ಅವರು, ಸತ್ಯದ ಪರೀಕ್ಷೆಗೆ ರಾಜ್ಯ ಸರ್ಕಾರ ನಡೆಸಿರುವ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ.
ʼಪಿಟಿಐʼ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಹೆಗ್ಗಡೆಯವರು, “ಈಗ ಮಾಡುತ್ತಿರುವ ಆರೋಪಗಳೆಲ್ಲವೂ ಆಧಾರರಹಿತ ಮತ್ತು ಸುಳ್ಳು. ಇಂತಹ ಆರೋಪಗಳಿಂದ ನನಗೆ ನಿಜಕ್ಕೂ ನೋವಾಗಿದೆ. ಈ ವಿಚಾರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ರೀತಿ ನೈತಿಕತೆ ಮೀರಿದ್ದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೀಘ್ರ ತನಿಖೆ ಮುಗಿಯಲಿ
ಎಸ್ಐಟಿ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸಿ ಸತ್ಯ ಹೊರತರಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಗಡೆಯವರು, "ನಾವು ಅದೇ ದಿನ ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದೇವೆ. ಇದು ರಾಜ್ಯ ಸರ್ಕಾರದ ಉತ್ತಮ ನಿರ್ಧಾರ. ಇದರಿಂದ ಸತ್ಯ ಹೊರಬರಬೇಕು. ಅದು ಶಾಶ್ವತವಾಗಿರಬೇಕು. ಆರೋಪಗಳನ್ನು ಮಾಡಿ ಹಾಗೆಯೇ ಉಳಿಸುವುದು ಸರಿಯಲ್ಲ. ತನಿಖೆಯನ್ನು ಶೀಘ್ರ ಮುಗಿಸಬೇಕು" ಎಂದು ಮನವಿ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಬಂದಿರುವ ಆರೋಪಗಳ ತನಿಖೆಗಾಗಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಧರ್ಮಸ್ಥಳದ ಸುತ್ತಮುತ್ತ ಮಾನವ ಅವಶೇಷಗಳನ್ನು ಹೂಳಲಾಗಿದೆಯೇ ಎಂಬುದನ್ನು ಪತ್ತೆ ಮಾಡಲು ಎಸ್.ಐ.ಟಿ. ತಂಡ ಹಲವಾರು ಸ್ಥಳಗಳಲ್ಲಿ ಉತ್ಖನನ ಕೂಡ ನಡೆಸಿದೆ.
ಸೌಜನ್ಯ (17) ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ 2012ರ ಅಕ್ಟೋಬರ್ 8ರಂದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈಗ ಆ ಬಾಲಕಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ
“ಈ ಸಂಬಂಧದ ತನಿಖೆಗಳು ಆದಷ್ಟು ಬೇಗ ಮುಗಿದು ಸಮಸ್ಯೆ ಬಗೆಹರಿಯಬೇಕು ಎಂಬುದು ನಮ್ಮ ಮನವಿ. ನಮ್ಮ ಎಲ್ಲ ದಾಖಲೆಗಳು ಮತ್ತು ನಾವೂ ಪಾರದರ್ಶಕವಾಗಿದ್ದೇವೆ. ಎಸ್ಐಟಿ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಧರ್ಮಸ್ಥಳ ಮತ್ತು ಅದರ ಟ್ರಸ್ಟ್ ಅನ್ನು ಗುರಿಯಾಗಿಸಿ ಕಳೆದ ಹದಿನಾಲ್ಕು ವರ್ಷಗಳಿಂದ “ಸಂಘಟಿತ ಅಭಿಯಾನ” ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
“ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಸಹಿಸದ ಕೆಲವು ಶಕ್ತಿಗಳು ಸುಳ್ಳು ಪ್ರಚಾರದಲ್ಲಿ ತೊಡಗಿವೆ. ಆದರೆ ನಾವು ಮಾತ್ರ ಇದರಿಂದ ವಿಚಲಿತರಾಗಿಲ್ಲ” ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಯಾರೇ ಸತ್ತರೂ ಪಂಚಾಯತ್‌ಗೆ ತಿಳಿಸುತ್ತೇವೆ: ಮುಖವಾಡ ಧರಿಸಿದ ವ್ಯಕ್ತಿಯೊಬ್ಬರು ಎರಡು ದಶಕಗಳ ಹಿಂದೆ ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವುದಾಗಿ ಹೇಳಿಕೊಂಡಿರುವ ಇತ್ತೀಚಿನ ವಿಡಿಯೋಗಳ ಬಗ್ಗೆ ಪ್ರಸ್ತಾಪಿಸಿದ ಅವರು, "ಇದು ಅಸಾಧ್ಯ. ಧರ್ಮಸ್ಥಳದಲ್ಲಿ ಯಾರಾದರೂ ಮೃತಪಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಯಾವತ್ತೇ ಆಗಲಿ ಸಾವು ಸಂಭವಿಸಿದರೆ, ನಾವು ಪಂಚಾಯತ್‌ಗೆ ತಿಳಿಸುತ್ತೇವೆ. ಅವರು ಸರಿಯಾದ ಪರಿಶೀಲನೆ ನಡೆಸಿ ಶವವನ್ನು ಹೂಳುತ್ತಾರೆ" ಎಂದು ಸ್ಪಷ್ಟೀಕರಿಸಿದರು.
ಸಾಮಾಜಿಕ ಮಾಧ್ಯಮವು ಯುವ ಮನಸ್ಸುಗಳನ್ನು ಹಾಳು ಮಾಡುತ್ತಿರುವುದು ಕಳವಳಕಾರಿ ಎಂದು ಹೇಳಿದ ವೀರೇಂದ್ರ ಹೆಗ್ಗಡೆಯವರು, “ಯುವಜನರು ನಂಬಿಕೆಗಳಿಂದ ದೂರ ಸರಿಯಬೇಕು ಎಂಬುದು ಅವರ ಬಯಕೆಯಾಗಿದೆ" ಎಂದು ವಿಷಾದಿಸಿದರು.
“ವಿಷಯಗಳನ್ನು ಚಿತ್ರಿಸಿರುವ ರೀತಿ ನಮಗೆ ಆಘಾತ ಮತ್ತು ಅಚ್ಚರಿ ತಂದಿದೆ. ಸಾಮಾಜಿಕ ಮಾಧ್ಯಮವು ಒಂದು ಪ್ರಬಲ ಮಾಧ್ಯಮವಾಗಿದೆ. ನಾವು ಸಾಮಾಜಿಕ ಮಾಧ್ಯಮವನ್ನು ನಮ್ಮ ಒಳ್ಳೆಯ ಕೆಲಸಗಳನ್ನು ಪ್ರಚಾರ ಮಾಡಲು ಬಳಸಿಕೊಂಡಿಲ್ಲ ಎಂದು ನಮ್ಮ ಅನೇಕ ಹಿತೈಷಿಗಳು ಹೇಳುತ್ತಾರೆ. ಸಮಾಜದಲ್ಲಿ ನಾವು ಮಾಡಿರುವ ಕಾರ್ಯ ನಮ್ಮ ಕರ್ತವ್ಯ, ಇದು ಒಂದು ಬದ್ಧತೆ ಮತ್ತು ಸೇವೆ. ನಾವು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲ ಹಳ್ಳಿಗಳನ್ನು ತಲುಪಿ 55 ಲಕ್ಷ ಕುಟುಂಬಗಳನ್ನು ಸಂಪರ್ಕಿಸಿದ್ದೇವೆ” ಎಂದು ಅವರು ವಿವರಿಸಿದರು.
ವಿದೇಶದಲ್ಲಿದ್ದುದಕ್ಕೆ ಸಾಕ್ಷ್ಯ ನೀಡಿದ್ದೇವೆ
ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮತ್ತೆ ಕರೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಹೆಗ್ಗಡೆಯವರು, “ಅಂತಹ ಘಟನೆ ನಡೆದಿದೆ ಎಂದು ನಮಗೆ ತಿಳಿದ ತಕ್ಷಣವೇ ನಾವು ಅದೇ ದಿನ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ನಮ್ಮ ಕುಟುಂಬದ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಆಧಾರರಹಿತ. ನಮ್ಮ ಕುಟುಂಬದ ಸದಸ್ಯರು ಆಗ ಶಿಕ್ಷಣದ ಉದ್ದೇಶದಿಂದ ವಿದೇಶದಲ್ಲಿದ್ದರು. ನಾವು ಅದಕ್ಕೆ ದಾಖಲೆಗಳನ್ನು ನೀಡಿದ್ದೇವೆ. ಇವು ದುರುದ್ದೇಶಪೂರಿತ ಪ್ರಚಾರಗಳು” ಎಂದು ಹೇಳಿದರು.
“ಈ ಹಿಂದೆ ಸಿಬಿಐ ತನಿಖೆ ನಡೆಸಿದಾಗಲೂ ನಾವು ಸಹಕರಿಸಿದ್ದೇವೆ. ನಾವು ಎಲ್ಲಾ ರೀತಿಯ ತನಿಖೆಗಳನ್ನು ಸ್ವಾಗತಿಸಿದ್ದೇವೆ” ಎಂದು ಧರ್ಮಾಧಿಕಾರಿ ಹೆಗ್ಗಡೆಯವರು ತಿಳಿಸಿದರು.
ಆಸ್ತಿಯ ದುರುಪಯೋಗದ ಆರೋಪಗಳನ್ನು ಕೂಡ ತಳ್ಳಿಹಾಕಿದ ಅವರು, “ನಮ್ಮ ಆಸ್ತಿ ಅಂತ ಏನೂ ಇಲ್ಲ. ಕುಟುಂಬದ ಬಳಿ ಇರುವುದು ಬಹಳ ಕಡಿಮೆ ಆಸ್ತಿ ಮತ್ತು ಎಲ್ಲಾ ಆಸ್ತಿಗಳ ದಾಖಲೆಗಳು ಟ್ರಸ್ಟ್ನ ಒಡೆತನದಲ್ಲಿವೆ” ಎಂದು ಸ್ಪಷ್ಟಪಡಿಸಿದರು. ಆಸ್ತಿಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ ದಾಖಲೆಗಳು ಪುರಾವೆ ಒದಗಿಸುತ್ತವೆ ಎಂದು ಅವರು ಹೇಳಿದರು. ಟ್ರಸ್ಟ್ ಅನ್ನು ಕುಟುಂಬ ಸದಸ್ಯರು ಪಾರದರ್ಶಕವಾಗಿ ನಿರ್ವಹಿಸುತ್ತಿದ್ದಾರೆ ಎಂದೂ ಅವರು ಹೇಳಿದರು.
“ನಾವು ಒಟ್ಟು ನಾಲ್ಕು ಸಹೋದರರು. ಒಬ್ಬ ಸಹೋದರ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ನೋಡಿಕೊಳ್ಳುತ್ತಾರೆ, ಮತ್ತೊಬ್ಬ ಸಹೋದರ ಇಲ್ಲಿನ ದೇವಾಲಯದ ಜೊತೆಗೆ ಸಮಾಜ ಸೇವೆಗಳ ಮೇಲ್ವಿಚಾರಣೆ ನಡೆಸುತ್ತಾರೆ. ನನಗೆ ಒಬ್ಬ ಸಹೋದರಿ ಇದ್ದು, ಅವರ ಪತಿ ಧಾರವಾಡದ ಎಸ್‌ಡಿಎಂಸಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಟ್ರಸ್ಟ್ ಹೆಸರಿನಲ್ಲಿವೆ” ಎಂದು ಹೆಗ್ಗಡೆಯವರು ವಿವರಣೆ ನೀಡಿದರು.
ಜೈನರು ಅನೇಕ ದೇಗುಲ ನಿರ್ವಹಿಸುತ್ತಾರೆ
ಜೈನ ಸಮುದಾಯಕ್ಕೆ ಸೇರಿದ ಕುಟುಂಬವೊಂದು ಹಿಂದೂ ದೇವಾಲಯವನ್ನು ನಿರ್ವಹಿಸುತ್ತಿರುವುದರ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಹೆಗ್ಗಡೆಯವರು, “ಈ ಆರೋಪದಲ್ಲಿ ಸತ್ಯವಿದೆ ಎಂದು ನಾನು ಭಾವಿಸಲಾರೆ. ಎಲ್ಲ ವಿಧಿವಿಧಾನಗಳನ್ನು ಪಾಲಿಸುವ ಜೈನರಿಂದ ನಿರ್ವಹಿಸಲಾಗುವ ಅನೇಕ ದೇವಾಲಯಗಳಿವೆ” ಎಂದರು. ಈ ವಿವಾದವು ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂಬ ಮಾತನ್ನು ಅವರು ತಳ್ಳಿಹಾಕಿದರು.
"ಇಲ್ಲ, ನಾನು ಹಾಗೆ ಭಾವಿಸುವುದಿಲ್ಲ. ಕಾಂಗ್ರೆಸ್ ನಾಯಕರು ಕೂಡ ಇಲ್ಲಿಗೆ ಬಂದಿದ್ದಾರೆ. ಜೆಡಿಎಸ್ ನಾಯಕರೂ ಬಂದಿದ್ದಾರೆ. ಕೆಲವು ಜನರು ದೇವಾಲಯವನ್ನು ಕೆಣಕಲು ಬಯಸುತ್ತಾರೆ ಮತ್ತು ಎಲ್ಲಾ ಪಕ್ಷಗಳು ದೇವಾಲಯದ ಬೆಂಬಲಕ್ಕೆ ನಿಂತಿವೆ" ಎಂದು ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳವನ್ನು ಅವಮಾನಿಸಲು ಪಿತೂರಿ ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಅವರು ಸ್ವಾಗತಿಸಿದರು.
ಯಾವುದೇ ತಪ್ಪು ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಸಹಜ ಹೇಳಿಕೆ ಮತ್ತು ಅವರು ಅದನ್ನು ಹೇಳಿರುವುದು ಒಳ್ಳೆಯದು ಎಂದರು.
ಶಿಕ್ಷೆ ವಿಚಾರದಲ್ಲಿ ಪಕ್ಷಪಾತವಿಲ್ಲ: ದೇವಾಲಯದ ಅಧಿಕಾರಿಗಳು ಅಥವಾ ಬೇರೆ ಯಾರಾದರೂ ತಪ್ಪು ಮಾಡಿದ್ದರೆ, ಅವರಿಗೆ ಶಿಕ್ಷೆ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಪಕ್ಷಪಾತ ತೋರಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಧರ್ಮಸ್ಥಳದ ಮೇಲಿನ ನಂಬಿಕೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಪುನರುಚ್ಚರಿಸಿದ ಹೆಗ್ಗಡೆಯವರು, “ನಾವು ಎಂದಿನಂತೆ ಪೂಜೆ, ವಿಧಿವಿಧಾನಗಳನ್ನು ನಡೆಸುತ್ತಿದ್ದೇವೆ. ಕ್ಷೇತ್ರಕ್ಕೆ ಬರುತ್ತಿರುವ ಜನರು ಅಥವಾ ಸಂಪ್ರದಾಯಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ" ಎಂದು ತಿಳಿಸಿದರು.
ತನಿಖೆ ನಡೆಯುತ್ತಿರುವ ವೇಗದ ಬಗ್ಗೆ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು. “ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಶೀಘ್ರವೇ ಅಂತಿಮ ವರದಿ ಹೊರಬೀಳಲಿದೆ ಎಂದು ನಾನು ನಂಬುತ್ತೇನೆ” ಎಂದರು.
"ಆರೋಪಗಳು ಸುಳ್ಳೆಂದು ಸಾಬೀತಾಗುವುದರಿಂದ ಅಪಪ್ರಚಾರ ಕೊನೆಹಾಡಿದಂತಾಗುತ್ತದೆ. ದೇವಾಲಯದ ಬೆಂಬಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬಂದಿದ್ದಾರೆ” ಎಂದರು.
“ಈ ಎಲ್ಲ ಪಿತೂರಿಗಳ ಹಿಂದೆ ಯಾರಿದ್ದಾರೆ ಎಂಬುದು ನಮ್ಮ ಮೂಲಗಳಿಂದ ನಮಗೆ ತಿಳಿದಿದೆ. ಆದರೆ, ನಮ್ಮ ಬಳಿ ಪುರಾವೆಗಳಿಲ್ಲ, ಆದ್ದರಿಂದ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಎಸ್ಐಟಿ ತನಿಖೆ ನಡೆಸುತ್ತಿರುವುದರಿಂದ ಅದನ್ನು ಸಾಬೀತುಪಡಿಸುವುದು ಅವರ ಜವಾಬ್ದಾರಿ” ಎಂದು ಅವರು ನುಡಿದರು.