ವಾಲ್ಮೀಕಿ ನಿಗಮ ಹಗರಣ | ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೊರೆಹೋದ ಇಡಿ

Update: 2024-07-23 07:14 GMT

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳುವಂತೆ ಬಂಧಿತರ ಮೇಲೆ ಒತ್ತಡ ಹೇರಿದ ಆರೋಪದಡಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.

ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುವ ಸಂಚಿನ ಭಾಗವಾಗಿ ಇಡಿ ಅಧಿಕಾರಿಗಳು, ಬಂಧಿತ ಆರೋಪಿಗಳ ಮೇಲೆ ಒತ್ತಡ ಹೇರಿ ಸಿದ್ದರಾಮಯ್ಯ ಹೆಸರು ಹೇಳುವಂತೆ ಬೆದರಿಸಿದ್ದಾರೆ ಎಂದು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ದಾಖಲಿಸಲಾಗಿತ್ತು.

ಪ್ರಕರಣದಲ್ಲಿ ಇಡಿ ಅಧಿಕಾರಿಗಳ ತನಿಖೆಗೆ ಒಳಗಾಗಿದ್ದ ನಿಗಮದ ನಿರ್ದೇಶಕ ಕಲ್ಲೇಶ್ ಬಿ ಅವರು ತಮಗೆ ಇಡಿ ಅಧಿಕಾರಿಗಳು ಕಿರುಕುಳ ನೀಡಿ, ಬೆದರಿಕೆ ಹಾಕಿ ಮಾಜಿ ಸಚಿವ ಬಿ ನಾಗೇಂದ್ರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಅಕ್ರಮ ಹಣಕಾಸು ವಹಿವಾಟು ನಡೆದಿದೆ ಎಂದು ಹೇಳಿಕೆ ನೀಡು, ನಿನ್ನನ್ನು ಬಿಟ್ಟುಬಿಡುತ್ತೇವೆ ಎಂದು ಹೇಳಿದ್ದಾರೆ ಎಂದು ಇಡಿ ಅಧಿಕಾರಿಗಳಾದ ಮುರುಳಿ ಕಣ್ಣನ್ ಮತ್ತು ಮಿತ್ತಲ್ ವಿರುದ್ಧ ದೂರು ದಾಖಲಿಸಿದ್ದರು.

ಈ ದೂರಿನ ಬೆನ್ನಲ್ಲೇ ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅವರ ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರ ವಿಧಾನಸೌಧದ ಎದುರಿನ ಅಂಬೇಡ್ಕರ್ ಪ್ರತಿಮೆಯ ಎದುರು ಧರಣಿ ನಡೆಸಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಇಡಿ ಮೂಲಕ ಷಢ್ಯಂತ್ರ ನಡೆಸುತ್ತಿದೆ. ಇದು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಕತ್ತು ಹಿಸುಕುವ ಯತ್ನ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ನಡುವೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಇಡಿ ಅಧಿಕಾರಿಗಳು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಡಿ ಪರ ವಕೀಲ ಮಧುಕರ ದೇಶಪಾಂಡೆ ಬೆಳಿಗ್ಗೆ 10.30 ಕ್ಕೆ ಹೈಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಕೋರಿಕೆ ಸಲ್ಲಿಸಿದ್ದು, ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.

ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ವಾದ ಮಂಡಿಸಲಿದ್ದಾರೆ.

Tags:    

Similar News