ಹಿರಿಯ ಪತ್ರಕರ್ತ ಉಮಾಪತಿ ಅವರಿಗೆ ವಡ್ಡರ್ಸೆ ಪತ್ರಿಕೋದ್ಯಮ ಪ್ರಶಸ್ತಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸಕ್ತ ವರ್ಷದಿಂದ ʼವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮʼ ಪ್ರಶಸ್ತಿಯನ್ನು ಆರಂಭಿಸಿದೆ.

Update: 2024-12-05 14:42 GMT

ಹಿರಿಯ ಪತ್ರಕರ್ತ, ಅಂಕಣಕಾರ ಡಿ.ಉಮಾಪತಿ ಅವರನ್ನು ʼವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ" ಪ್ರಶಸ್ತಿಗೆ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸಕ್ತ ವರ್ಷದಿಂದ ʼವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮʼ ಪ್ರಶಸ್ತಿ ಆರಂಭಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯದ ಕುರಿತು ವರದಿ, ವಿಶೇಷ ಲೇಖನಗಳ ಪ್ರಕಟಣೆಯನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024 ರ ಆಯವ್ಯಯದಲ್ಲಿ ಹಿರಿಯ ಪತ್ರಕರ್ತ "ವಡ್ಡರ್ಸೆ ರಘುರಾಮಶೆಟ್ಟಿ" ಹೆಸರಿನಲ್ಲಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಿದ್ದರು.

ನ್ಯಾ.ಅಶೋಕ ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಶಸ್ತಿ ಆಯ್ಕೆ ಸಮಿತಿಯು ಒಮ್ಮತದಿಂದ ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರನ್ನು "ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮʼʼ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ವಿವರಿಸಿದ್ದಾರೆ. ಪ್ರಶಸ್ತಿಯು 2 ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಡಿ.ಉಮಾಪತಿ ಪರಿಚಯ

1959 ಮಾರ್ಚ್ 18 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಸಮೂಹ ಸಂಸ್ಥೆಯ ಕನ್ನಡಪ್ರಭ, ಪ್ರಜಾವಾಣಿ ದೆಹಲಿ ಪ್ರತಿನಿಧಿಯಾಗಿ 27 ವರ್ಷಗಳ ಪರಿಣಾಮಕಾರಿ ವರದಿಗಳಿಂದ ಹೆಸರು ಗಳಿಸಿದ್ದಾರೆ.

ಸಂಸತ್ ವರದಿ, ಚುನಾವಣಾ ವಿಶ್ಲೇಷಣೆ , ಸುಪ್ರೀಂಕೋರ್ಟ್‌ಗಳಲ್ಲಿ ನದಿ ನೀರು ನ್ಯಾಯಾಧೀಕರಣ ವ್ಯಾಜ್ಯಗಳು, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು ಹಾಗೂ ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಪಡೆದಿದ್ದಾರೆ.

ದೆಹಲಿಯಲ್ಲಿ ನೆಲೆಸಿರುವ ಡಿ. ಉಮಾಪತಿ ಅವರು ಆಂದೋಲನ , ರೈತ ಚಳವಳಿ, ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿ ಪ್ರಸ್ತುತ ’ನ್ಯಾಯಪಥ (ಗೌರಿ ಮಿಡಿಯಾ)’ ಮತ್ತು ’ಈ ದಿನ’ ವೆಬ್ ಪೋರ್ಟಲ್‌ನಲ್ಲಿ ಕನ್ಸಲ್ಟಿಂಗ್ ಎಡಿಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ʼದೆಹಲಿ ನೋಟʼ, ’ಪದಕುಸಿಯೇ ನೆಲವಿಲ್ಲ’ಉಮಾಪತಿ ಅವರ ಎರಡು ಮಹತ್ವದ ಕೃತಿಗಳನ್ನು ಉಮಾಪತಿ ಪ್ರಕಟಿಸಿದ್ದಾರೆ.

Tags:    

Similar News