ಲೋಕ ಸ್ವಾರಸ್ಯ | ನರೇಂದ್ರ ಮೋದಿ ಚಿತ್ರ ಬಳಕೆ ʻಫೈಟ್‌ʼ: ಬಿಜೆಪಿಯಿಂದ ಈಶ್ವರಪ್ಪ ವಿರುದ್ಧ ಕೇಸ್!

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸುವುದು, ಅವರ ಹೆಸರೇಳಿ ಮತ ಕೇಳುವ ವಿಚಾರ ಬಿಜೆಪಿ ಮತ್ತು ಕೆ.ಎಸ್‌ ಈಶ್ವರಪ್ಪ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಕೋರ್ಟ್‌ ಮೊರೆ ಹೋಗಿದೆ.

Update: 2024-04-16 06:07 GMT
ಕೆ.ಎಸ್‌ ಈಶ್ವರಪ್ಪ

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಬಿಜೆಪಿ ನಡುವೆ ʻಪ್ರಧಾನಿ ನರೇಂದ್ರ ಮೋದಿ ಭಾವಚಿತ್ರʼ ಬಳಕೆ ವಿಚಾರ ಇದೀಗ ತಾರಕಕ್ಕೇರಿದೆ. ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕೆ.ಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಚುನಾವಣಾ ಪ್ರಚಾರ ಹಾಗೂ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸುತ್ತಿದ್ದು, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು.

ಇದೀಗ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರದಲ್ಲಿ ಹಾಗೂ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಬಳಸುವುದಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಅವರು ಶಿವಮೊಗ್ಗ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ (ಕೇಸ್) ದಾಖಲಿಸಿದ್ದಾರೆ.

ಸೋಮವಾರ ಈ ಸಂಬಂಧ ದಾವೆ ಹೂಡಿದ್ದು ಅದರಲ್ಲಿ, ʻಬಿಜೆಪಿಯ ಅಧಿಕೃತ ಅಭ್ಯರ್ಥಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಲು ಅವಕಾಶವಿದ್ದು ಬೇರೆಯವರು ಚಿತ್ರ ಬಳಸಿದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಪಕ್ಷದ ಅಭ್ಯರ್ಥಿಯನ್ನು ಹೊರತುಪಡಿಸಿ, ಬೇರೆಯವರು ಮೋದಿ ಚಿತ್ರ  ಬಳಸಿದರೆ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್- 29ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಕೆ.ಎಸ್. ಈಶ್ವರಪ್ಪ ಅವರು ಚುನಾವಣೆ ಪ್ರಚಾರ ಸಭೆಗಳಲ್ಲಿ ನರೇಂದ್ರ ಮೋದಿ ಅವರ ಚಿತ್ರವನ್ನಷ್ಟೇ ಅಲ್ಲ, ಅವರ ಹೆಸರು ಬಳಕೆ ಮಾಡಿ ಮತಯಾಚನೆ ಮಾಡುವುದಕ್ಕೂ ತಡೆಯಾಜ್ಞೆ ಕೊಡಬೇಕುʼ ಎಂದು ಬಿಜೆಪಿ ಕೋರಿದೆ.

ಇನ್ನು ಈಗಾಗಲೇ ಕೆ.ಎಸ್ ಈಶ್ವರಪ್ಪ ಅವರು ಚುನಾವಣಾ ಪ್ರಚಾರದಲ್ಲಿ, ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸುವುದಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂದು ವಾದಿಸಿದ್ದರು. ಅಲ್ಲದೇ ಈ ಸಂಬಂಧ ಈಗಾಗಲೇ ಶಿವಮೊಗ್ಗ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದ್ದು, ಅರ್ಜಿ ವಿಚಾರಣೆಯು ಮಂಗಳವಾರ  ಮಂಗಳವಾರ ನಡೆಯುವ ಸಾಧ್ಯತೆ ಇದೆ.

“ನಾನು ದೇಶಭಕ್ತ, ಮೋದಿ ಭಕ್ತ. ನನ್ನ ಎದೆ ಬಗೆದರೆ ಒಂದು ಕಡೆ ಶ್ರೀರಾಮ, ಮತ್ತೊಂದು ಕಡೆ ಮೋದಿ ಕಾಣ್ತಾರೆ” ಎಂದು ಹೇಳಿರುವ ಕೆ.ಎಸ್ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ತಮ್ಮ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸುತ್ತಿದ್ದಾರೆ. ಆದರೆ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮತ್ತು ಬಿಜೆಪಿ ಶಿವಮೊಗ್ಗ ಘಟಕದ ಮುಖಂಡರು, ಈಶ್ವರಪ್ಪ ಅವರು ಮೋದಿ ಚಿತ್ರ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆ.ಎಸ್ ಈಶ್ವರಪ್ಪ ಅವರು, “ಮೋದಿ ಚಿತ್ರ ಬಳಸಿಕೊಳ್ಳಬಾರದು ಎಂದು ಹೇಳುವುದಕ್ಕೆ ಮೋದಿ, ಅವರ ಅಪ್ಪನ ಮನೆಯ ಆಸ್ತಿ ಅಲ್ಲ. ಪ್ರಧಾನಿ ಮೋದಿ ವಿಶ್ವ ನಾಯಕ. ನಾನು ನರೇಂದ್ರ ಮೋದಿಯನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ” ಎಂದು ಈಶ್ವರಪ್ಪ ತಿರುಗೇಟು ಕೊಟ್ಟಿದ್ದರು.   

Tags:    

Similar News