ಕೇಂದ್ರದಿಂದ ಯೂರಿಯಾ ಪೂರೈಕೆ 50% ಕಡಿತ: ಎನ್ ಚಲುವರಾಯಸ್ವಾಮಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವ ಉದ್ದೇಶದಿಂದ ಯೂರಿಯಾ ಬಳಕೆ‌ ಕಡಿಮೆ ಮಾಡಲು ಕರೆ ನೀಡಿದ್ದಾರೆ ಎಂದು ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.;

Update: 2025-07-04 12:33 GMT

ಎನ್. ಚಲುವರಾಯಸ್ವಾಮಿ

ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಜಿಲ್ಲೆಯಲ್ಲೂ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರದ ನಿರ್ಧಾರದಂತೆ ಮುಂದಿನ ದಿನಗಳಲ್ಲಿ ಯೂರಿಯಾ ಪೂರೈಕೆ ಶೇಕಡಾ 50ರಷ್ಟು ಕಡಿತಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಮೈಸೂರಿನ ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ವಿಭಾಗ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿಯ ಫಲವತ್ತತೆ ಕಾಪಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೂರಿಯಾ ಬಳಕೆ ಕಡಿಮೆ ಮಾಡಲು ಕರೆ ನೀಡಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ರಾಸಾಯನಿಕಗಳು ಹಾಗೂ ಕೀಟನಾಶಕಗಳ ಬಳಕೆಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸಾವಯವ ಕೃಷಿ, ಸಮಗ್ರ ಬೇಸಾಯದ ಲಾಭಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಉತ್ತಮ ಮಳೆ, ಬಿತ್ತನೆ ಚುರುಕು ಮತ್ತು ಬೆಳೆ ವಿಮೆ ಕರೆ

ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಪೂರ್ವ ಮುಂಗಾರು ಅಧಿಕವಾಗಿ ಸುರಿದು ಕೆಲವೆಡೆ ಹಾನಿ ಮಾಡಿದೆ. ಹೀಗಾಗಿ, ರೈತರು ಪ್ರತಿ ವರ್ಷ ಬೆಳೆ ವಿಮೆ ಮಾಡಿಸುವ ಮೂಲಕ ಸಂಭವನೀಯ ನಷ್ಟವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವರು ಕರೆ ನೀಡಿದರು. 2023-24ರಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿತ್ತು. ಆಗ ರೈತರ ಸಂಕಷ್ಟಕ್ಕೆ ಸ್ಪಂದಿಸಿ ₹3454 ಕೋಟಿ ಬರ ಪರಿಹಾರ ನೀಡಲಾಗಿತ್ತು. 2024-25ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಗುರಿಗಿಂತ ಹೆಚ್ಚು, ಅಂದರೆ 153 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿತ್ತು. ಈ ವರ್ಷ 148.48 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳು ಮತ್ತು 12.20 ಲಕ್ಷ ಟನ್ ಎಣ್ಣೆಕಾಳು ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಕೃಷಿ ಸಚಿವರು ಹೇಳಿದರು.

ಕೃಷಿ ಯಾಂತ್ರೀಕರಣ ಮತ್ತು ಮೌಲ್ಯವರ್ಧನೆಗೆ ಆದ್ಯತೆ

ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಲಾಗಿದೆ. ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಯಂತ್ರೋಪಕರಣಗಳು, ಸೂಕ್ಷ್ಮ ನೀರಾವರಿ ಸಲಕರಣೆಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೃಷಿ ಭಾಗ್ಯ ಯೋಜನೆಯನ್ನು ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸಲಾಗಿದ್ದು, 24,000 ಕೃಷಿ ಹೊಂಡಗಳ ನಿರ್ಮಾಣ ಗುರಿಯನ್ನು ಪೂರೈಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ತಾವು ರಾಜ್ಯಾದ್ಯಂತ ಪ್ರವಾಸ ಮಾಡಿ ಕೃಷಿ ಯೋಜನೆಗಳ ಅನುಷ್ಠಾನ ಹಾಗೂ ಕೃಷಿ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ವಿಭಾಗಗಳಲ್ಲೂ ಅಧಿಕಾರಿಗಳ ಸಭೆ ನಡೆಸಿ ಸಲಹೆ, ಸೂಚನೆ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಈ ಸಭೆಯಲ್ಲಿ ಕೃಷಿ ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ. ಜಿ.ಟಿ. ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮೊಹಮ್ಮದ್ ಪರ್ವೇಜ್ ಬಂಥನಾಳ, ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನುಪ್, ಬೀಜ ಪ್ರಮಾಣೀಕರಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಸದಾಶಿವ ಹಾಗೂ ಇತರರು ಹಾಜರಿದ್ದರು.

Tags:    

Similar News