ಪ್ರಜ್ವಲ್ ಪೆನ್‌ ಡ್ರೈವ್‌ ಪ್ರಕರಣ | ನಮೂದಾಗದ ಅತ್ಯಾಚಾರ ಕಲಂ: ಡಿಜಿಪಿಗೆ ಮಹಿಳಾ ಸಂಘಟನೆಗಳ ದೂರು

ದೂರು ಪಡೆದ ಪೊಲೀಸರು ಅತ್ಯಾಚಾರದ ಕಾಲಂನಡಿ ಪ್ರಕರಣ ದಾಖಲಿಸದೇ ಬೇರೆ ಕಲಂಗಳನ್ನು ನಮೂದಿಸಿದ್ದಾರೆ ಎಂದು ಮಹಿಳಾ ಸಂಘಟನೆಗಳು ಆರೋಪಿಸಿವೆ;

Update: 2024-04-30 10:47 GMT
ಪ್ರಜ್ವಲ್‌, ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಬೆಂಗಳೂರು: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಹೊಳೆನರಸೀಪುರ ಶಾಸಕ‌ ಎಚ್‌ ಡಿ ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದರೂ, ಪೊಲೀಸರು ಅತ್ಯಾಚಾರ ಕಲಂನಡಿ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಐಜಿ) ಸೋಮವಾರ ದೂರು ಸಲ್ಲಿಸಿದ್ದಾರೆ.

ಸಂತ್ರಸ್ತ ಮಹಿಳೆಯೊಬ್ಬರು ಹೊಳೆನರಸೀಪುರ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದ ಪೊಲೀಸರು ಅತ್ಯಾಚಾರದ ಕಾಲಂನಡಿ ಪ್ರಕರಣ ದಾಖಲಿಸದೇ ಬೇರೆ ಕಲಂಗಳನ್ನು ನಮೂದಿಸಿದ್ದಾರೆ. ಪ್ರಭಾವಿ ರಾಜಕಾರಣಿಗಳ ಕುಟುಂಬದವರನ್ನು ರಕ್ಷಿಸಲು ಹೀಗೆ ಮಾಡಿರುವ ಶಂಕೆ ಇದೆ. ಆರೋಪಿ ಚಿತ್ರೀಕರಿಸಿರುವ ನೂರಾರು ವಿಡಿಯೊಗಳಲ್ಲಿ ಅತ್ಯಾಚಾರ ನಡೆದಿರುವುದೂ ಸ್ಪಷ್ಟವಾಗಿದೆ. ಇವೆಲ್ಲವನ್ನೂ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಜತೆಗೇ ವಿಚಾರಣೆ ನಡೆಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ. ಉಪಾಧ್ಯಕ್ಷೆ ಕೆ.ನೀಲಾ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಬಿಹಾ ಭೂಮಿಗೌಡ, ಡಿವೈಎಫ್‌ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಅಖಿಲಾ ವಿದ್ಯಾಸಂದ್ರ, ಜ್ಯೋತಿ ಅನಂತ ಸುಬ್ಬರಾವ್, ವಿನಯ್ ಶ್ರೀನಿವಾಸ್ ಮತ್ತಿತರರು ಒತ್ತಾಯಿಸಿದ್ದಾರೆ.

ಹೊಳೆನರಸೀಪುರದ ಇನ್‌ಸ್ಪೆಕ್ಟರ್ ಅಮಾನತು ಮಾಡಬೇಕು. ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳುವಾಗ ಮಹಿಳಾ ಆಪ್ತಸಮಾಲೋಚಕರು ಇರಬೇಕು. ಸೂಕ್ತ ಭದ್ರತೆ ಒದಗಿಸಬೇಕು. ವಿಡಿಯೊದಲ್ಲಿನ ಮಹಿಳೆಯರನ್ನು ಪೊಲೀಸರೇ ಪತ್ತೆ ಹಚ್ಚಿ ಹೇಳಿಕೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಂಧನಕ್ಕೆ ಆಗ್ರಹ

ಆರೋಪಿಗಳಾದ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು ಎಂದು ಭಾರತ ಮಹಿಳಾ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಒತ್ತಾಯಿಸಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಗ್ರವಾಗಿ ತನಿಖೆ ನಡೆಸಬೇಕು. ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು ಎಂದು ಸಂಘಟನೆಯ ಅಧ್ಯಕ್ಷೆ ಎ. ಜ್ಯೋತಿ, ಕಾರ್ಯದರ್ಶಿ ಕೆ. ರೇಣುಕಾ, ದಿವ್ಯಾ ಎಸ್. ಬಿರಾದಾರ ಒತ್ತಾಯಿಸಿದ್ದಾರೆ.

Tags:    

Similar News