Bravo Bengaluru | ಕೇಂದ್ರ ಸಚಿವರಿಂದ ಆಟೋ ಚಾಲಕನ ಶ್ಲಾಘನೆ

ಗ್ರಾಹಕರು ಆಟೋ ಚಾಲಕನ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿದರೆ, ಸವಾರಿ ವೆಚ್ಚದ ಪಾವತಿ ಮಾಹಿತಿ ಸ್ಮಾರ್ಟ್‌ವಾಚ್ ಪರದೆ ಮೇಲೆ ಬರುತ್ತದೆ.

Update: 2024-09-23 11:09 GMT

ಬೆಂಗಳೂರಿನ ಆಟೋರಿಕ್ಷಾ ಚಾಲಕರೊಬ್ಬರು ತಮ್ಮ ಸ್ಮಾರ್ಟ್ ವಾಚ್ ಮೂಲಕ ಯುಪಿಐ ಪಾವತಿ ಸ್ವೀಕರಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದು, ಅವರ ನವೀನ ವಿಧಾನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲಕನನ್ನು ಶ್ಲಾಘಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ: ʻಇವರ ಬಳಿ ಯುಪಿಐ ಪಾವತಿ ತುಂಬಾ ಸುಲಭʼ. ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟಿಗೆ ಗ್ರಾಹಕರು ಆಟೋ ಚಾಲಕನ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿದರೆ, ಸವಾರಿ ವೆಚ್ಚದ ಪಾವತಿ ಸ್ಮಾರ್ಟ್‌ವಾಚ್ ಪರದೆ ಮೇಲೆ ಬರುತ್ತದೆ. 

ಆಟೋ ಚಾಲಕನ ಶ್ಲಾಘನೆ: ಆಟೋ ಡ್ರೈವರ್ ತೋರಿಸುತ್ತಿರುವ ಸ್ಮಾರ್ಟ್ ವಾಚ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ʻತಾಂತ್ರಿಕ ಬುದ್ಧಿಮತ್ತೆಯ ಆಧುನಿಕ ವಿಧಾನʼ ಎಂದು ಶ್ಲಾಘಿಸಿದ್ದಾರೆ.

ಎಕ್ಸ್ ಬಳಕೆದಾರ ವಿಶ್ವಜಿತ್,ʻಬೆಂಗಳೂರಿನ ಚತುರ ನಡೆಯನ್ನು ಆಟೋ ಅಣ್ಣ ತೋರಿಸಿಕೊಟ್ಟಿದ್ದಾರೆ,ʼ ಎಂದು ಹೊಗಳಿದ್ದಾರೆ. ʻಇದು ನೂತನ ಭಾರತದ ಚಿತ್ರʼ ಎಂದು ಒಬ್ಬರು ಹಾಗೂ ʻಇದು ಡಿಜಿಟಲ್ ಇಂಡಿಯಾದ ಮ್ಯಾಜಿಕ್ʼ ಎಂದು ಇನ್ನೊಬ್ಬರು ಎಕ್ಸ್‌ ನಲ್ಲಿ ಬರೆದಿದ್ದಾರೆ. 

ಯುಪಿಐ ವಹಿವಾಟು: 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ ) ಆರಂಭಿಸಿದ ಯುಪಿಐ, ಬ್ಯಾಂಕ್‌ಗಳ ನಡುವೆ ತ್ವರಿತ ವರ್ಗಾವಣೆಗೆ ಅವಕಾಶ ಮಾಡಿಕೊಡುವ ಮೂಲಕ ಕ್ರಾಂತಿಗೆ ಕಾರಣವಾಗಿದೆ. ಆಟೋ ಸವಾರಿ ಸೇರಿದಂತೆ ದೈನಂದಿನ ವಹಿವಾಟುಗಳನ್ನು ಸುಲಭಗೊಳಿಸಿದೆ.

ಡಿಜಿಟಲ್ ಪಾವತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯುಪಿಐ ಪ್ರತಿ ತಿಂಗಳು 60 ಲಕ್ಷ ಹೊಸ ಬಳಕೆದಾರರನ್ನು ಸೇರಿಸುತ್ತಿದೆ. 2024ರ ಏಪ್ರಿಲ್-ಜುಲೈ ಅವಧಿಯಲ್ಲಿ ಯುಪಿಐ ಮೂಲಕ ಸುಮಾರು 81 ಲಕ್ಷ ಕೋಟಿ ರೂ ವಹಿವಾಟು ನಡೆದಿದೆ.  

Tags:    

Similar News