ಡಿಸಿಎಂ ನಿವಾಸಕ್ಕೆ ಅನಿರೀಕ್ಷಿತ ಅತಿಥಿ: ನಾಗರಹಾವಿನ ಮರಿ ಪ್ರತ್ಯಕ್ಷ!
ಇದೇ ನಿವಾಸದಲ್ಲಿ ಹಾವು ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಎರಡು ತಿಂಗಳ ಹಿಂದೆಯೂ ಇದೇ ರೀತಿ ಮತ್ತೊಂದು ಹಾವು ಪತ್ತೆಯಾಗಿತ್ತು ಎಂದು ಪ್ರಸನ್ನ ಕುಮಾರ್ ಸ್ಮರಿಸಿಕೊಂಡಿದ್ದಾರೆ.;
ಡಿಸಿಎಂ ಡಿ.ಕೆ. ಶಿವಕುಮಾರ್ ಮನೆಯಲ್ಲಿ ವನ್ಯಜೀವಿ ತಜ್ಞ ಪ್ರಸನ್ನ ಕುಮಾರ್ ನಾಗರಹಾವಿನ ಮರಿಯನ್ನು ಸಂರಕ್ಷಿಸಿದರು.
ಶನಿವಾರ ಮಧ್ಯಾಹ್ನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸದಲ್ಲಿ ಅನಿರೀಕ್ಷಿತ ಅತಿಥಿಯೊಂದು ಕಾಣಿಸಿಕೊಂಡು, ಸಿಬ್ಬಂದಿಯನ್ನು ಒಂದು ಕ್ಷಣ ದಿಗಿಲುಗೊಳಿಸಿತು. ಆ ಅತಿಥಿ ಬೇರಾರೂ ಅಲ್ಲ, ಸುಮಾರು ಒಂದೂವರೆ ಅಡಿ ಉದ್ದದ ನಾಗರಹಾವಿನ ಮರಿ!
ನಿವಾಸದ ಆವರಣದಲ್ಲಿ ಓಡಾಡುತ್ತಿದ್ದ ಹಾವಿನ ಮರಿಯನ್ನು ಕಂಡ ಸಿಬ್ಬಂದಿ, ಕೂಡಲೇ ವನ್ಯಜೀವಿ ತಜ್ಞ ಪ್ರಸನ್ನ ಕುಮಾರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪ್ರಸನ್ನ ಕುಮಾರ್, ಯಾವುದೇ ಅಪಾಯವಾಗದಂತೆ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಈ ಘಟನೆ ನಡೆದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಿವಾಸದಲ್ಲಿ ಇರಲಿಲ್ಲ ಎಂದು ಗೊತ್ತಾಗಿದೆ.
ಇದೇ ನಿವಾಸದಲ್ಲಿ ಹಾವು ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಎರಡು ತಿಂಗಳ ಹಿಂದೆಯೂ ಇದೇ ರೀತಿ ಮತ್ತೊಂದು ಹಾವು ಪತ್ತೆಯಾಗಿತ್ತು ಎಂದು ಪ್ರಸನ್ನ ಕುಮಾರ್ ಸ್ಮರಿಸಿಕೊಂಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಹಾವು ಕಡಿತದ ಪ್ರಕರಣಗಳ ಬಗ್ಗೆಯೂ ಅವರು ಗಮನ ಸೆಳೆದರು. 2024ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 13,000ಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಮಾನವ-ವನ್ಯಜೀವಿ ಸಂಘರ್ಷದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.