BJP TICKET FIGHT | ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರ ಬೈಕ್‌ ರ‍್ಯಾಲಿ

ಉಡುಪಿ- ಚಿಕ್ಕಮಗಳೂರು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಕ್ಷೇತ್ರದಿಂದ ಟಿಕೆಟ್‌ ನೀಡಬಾರದೆಂದು ಬಿಜೆಪಿ ಸ್ಥಳೀಯ ಕಾರ್ಯಕರ್ತರು ನಿರಂತರ ಅಭಿಯಾನ ನಡೆಸುತ್ತಿದ್ದಾರೆ.;

Update: 2024-03-02 07:03 GMT

ಉಡುಪಿ: ಎರಡು ಬಾರಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಕ್ಷೇತ್ರದಿಂದ ಟಿಕೆಟ್ ನೀಡಬಾರದು ಎಂದು ಪತ್ರ ಚಳವಳಿ, ವಾಟ್ಸಪ್‌ ಅಭಿಯಾನ ನಡೆಯುತ್ತಿರುವ ಪಕ್ಷದ ಸ್ಥಳೀಯ ಕಾರ್ಯಕರ್ತರು, ಸ್ಥಳೀಯರಿಗೇ ಟಿಕೆಟ್‌ ನೀಡಲು ಆಗ್ರಹಿಸಿ ಶನಿವಾರ ಬೈಕ್‌ ರ‍್ಯಾಲಿ ಹಮ್ಮಿಕೊಂಡಿದ್ದಾರೆ.

ಶನಿವಾರ (ಮಾ.2) ಮಧ್ಯಾಹ್ನ ಮೂರು ಗಂಟೆಗೆ ಉಡುಪಿಯ ಮಲ್ಪೆ ಏಳೂರು ಮೊಗವೀರ ಭವನದಿಂದ ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ತನಕ ಬೈಕ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯ ಪೋಸ್ಟರ್‌ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

“ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಉಡುಪಿಯ ನಿಸ್ವಾರ್ಥ ಕಾರ್ಯಕರ್ತರು" ಎಂಬ ಹೆಸರಿನಲ್ಲಿ ಪೋಸ್ಟರ್‌ ವೈರಲ್‌ ಆಗುತ್ತಿದೆ.

ಮತದಾರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಸ್ಥಳೀಯ ಅಭ್ಯರ್ಥಿಯೇ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಬೈಕ್‌ ರ‍್ಯಾಲಿ ನಡೆಸಲಾಗುತ್ತಿದೆ.

“ಬಿಜೆಪಿಯ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಅಧಿಕಾರದ ದರ್ಪಗಳಿರದ, ಇತರ ಚುನಾವಣೆಗಳಲ್ಲಿ ಕಾರ್ಯಕರ್ತರಿಗೆ ಸಹಕಾರ ನೀಡುವ, ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿರುವ, ಉಡುಪಿ ಜಿಲ್ಲೆಯ ಸ್ಥಳೀಯ ಅಭ್ಯರ್ಥಿಯನ್ನೇ ಕ್ಷೇತ್ರದ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಬೇಕು ಎಂದು ಮನವಿ ಮಾಡಲು ಬೃಹತ್ ಬೈಕ್‌ ರ್ಯಾಲಿಗೆ ನಿಸ್ವಾರ್ಥ ಕಾರ್ಯಕರ್ತರು ಸ್ವ ಇಚ್ಛೆಯಿಂದ ಭಾಗವಹಿಸಬೇಕಾಗಿ ವಿನಂತಿ” ಎಂದು ಪೋಸ್ಟರ್‌ ನಲ್ಲಿ ಬರೆಯಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕ್ಷೇತ್ರ ವ್ಯಾಪ್ತಿಯ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳೆರಡಲ್ಲೂ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಸಂಸದೆ ಶೋಭಾ ವಿರುದ್ಧ ನಿರಂತರ ಅಭಿಯಾನಗಳನ್ನು ನಡೆಸುತ್ತಿದ್ದು, ಅವರಿಗೆ ಟಿಕೆಟ್‌ ನೀಡದಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸುತ್ತಿದ್ದಾರೆ. ಚಿಕ್ಕಮಗಳೂರು ಭಾಗದಲ್ಲಿ ಕೂಡ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ,

Tags:    

Similar News