ಬಾಳೆಹೊನ್ನೂರಲ್ಲಿ ಆನೆ ದಾಳಿಗೆ ಇಬ್ಬರು ಬಲಿ: ಪುಂಡಾನೆಗಳ ಸೆರೆಗೆ ಸಚಿವ ಈಶ್ವರ ಖಂಡ್ರೆ ಆದೇಶ

ಸರ್ಕಾರವು ಮೃತರ ಕುಟುಂಬದೊಂದಿಗೆ ಇದೆ. ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ನಿಯಮಾನುಸಾರ ಮೃತರ ಹತ್ತಿರದ ಬಂಧುಗಳಿಗೆ ಪರಿಹಾರವನ್ನು ತಕ್ಷಣ ವಿತರಿಸಬೇಕು ಎಂದು ಸಚಿವ ಖಂಡ್ರೆ ತಿಳಿಸಿದರು.;

Update: 2025-07-28 08:05 GMT

ಸಚಿವ ಈಶ್ವರ್‌ ಖಂಡ್ರೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಬಳಿ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದ ಘಟನೆಗೆ ಸಂಬಂಧಿಸಿದಂತೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಪುಂಡಾನೆಗಳನ್ನು ಸೆರೆಹಿಡಿಯಲು ಮತ್ತು ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಯಾದಗಿರಿಯಲ್ಲಿ ಈ ಬಗ್ಗೆ ಮಾತನಾಡಿದ ಸಚಿವರು, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿ ಉನ್ನತಾಧಿಕಾರಿಗಳು ನಿರಂತರವಾಗಿ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು. "ಆನೆಗಳು ನಾಡಿನಲ್ಲಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿ, ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು. ಜನರ ಅಮೂಲ್ಯ ಜೀವ ಹಾಗೂ ರೈತರ ಬೆಳೆ ರಕ್ಷಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು," ಎಂದು ಆದೇಶಿಸಿದರು.

ಮೃತರ ಕುಟುಂಬಗಳಿಗೆ ತಮ್ಮ ಸಂತಾಪ ಸೂಚಿಸಿದ ಖಂಡ್ರೆ, "ಸರ್ಕಾರವು ಮೃತರ ಕುಟುಂಬದೊಂದಿಗೆ ಇದೆ. ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ನಿಯಮಾನುಸಾರ ಮೃತರ ಹತ್ತಿರದ ಬಂಧುಗಳಿಗೆ ಪರಿಹಾರವನ್ನು ತಕ್ಷಣ ವಿತರಿಸಬೇಕು," ಎಂದು ತಿಳಿಸಿದರು.

ಜನರು ಸಹ ಆನೆಗಳ ಸಂಚಾರದ ಬಗ್ಗೆ ಮಾಹಿತಿ ದೊರೆತಾಗ ಮುಂಜಾನೆ ಮತ್ತು ಸಂಜೆ ವೇಳೆ ಎಚ್ಚರಿಕೆಯಿಂದ ಇರಬೇಕೆಂದು ಸಚಿವರು ಮನವಿ ಮಾಡಿದರು. "ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿವೆ, ಕಾಡಿನಲ್ಲಿಯೂ ಆನೆಗಳಿಗೆ ಸಾಕಷ್ಟು ಆಹಾರ ಲಭ್ಯವಿದೆ. ಹೀಗಿದ್ದರೂ ಆನೆಗಳು ಏಕೆ ನಾಡಿಗೆ ಬರುತ್ತಿವೆ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಬೇಕು," ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

Tags:    

Similar News