ಉ.ಕರ್ನಾಟಕ ಭಾರೀ ಮಳೆ| ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಬಿಜೆಪಿಯ ಎರಡು ತಂಡ ಭೇಟಿ

ಇಂದಿನಿಂದ(ಸೋಮವಾರ) ಬಿಜೆಪಿ ನಾಯಕರು ಮಳೆ ಪೀಡಿತ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪ್ರಕೃತಿ ಪ್ರಕೋಪಕ್ಕೆ ತುತ್ತಾದ ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದರು.

Update: 2025-09-29 06:09 GMT

ಉತ್ತರ ಕರ್ನಾಟಕ ಮಳೆ ಹಾನಿಯನ್ನು ಸಿಎಂ ಸಿದ್ದರಾಮಯ್ಯ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 

Click the Play button to listen to article

ಉತ್ತರ ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಿಗೆ ಇಂದಿನಿಂದ (ಸೋಮವಾರ) ಬಿಜೆಪಿಯ ಎರಡು ತಂಡಗಳು ಪ್ರವಾಸ ಕೈಗೊಂಡು ಮಳೆ ಹಾನಿ ವೀಕ್ಷಿಸಲಿವೆ. ನಿರಂತರ ಮಳೆಯಿಂದ ಮನೆ, ಬೆಳೆಗಳು ನಷ್ಟವಾಗಿದ್ದು, ಜಾನುವಾರು ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಮಳೆ ನಿ ವೀಕ್ಷಣೆ ನಡೆಸಲಿವೆ. 

ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ವಾಗ್ದಾಳಿ

"ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ  ಉತ್ತರ ಕರ್ನಾಟಕದಲ್ಲಿ ನೆರೆಪರಿಹಾರಕ್ಕಾಗಿ ಕೇಂದ್ರದ ಅನುದಾನಕ್ಕೆ ಕಾಯಲಿಲ್ಲ, ಬದಲಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮಾರ್ಗಸೂಚಿಗಿಂತ ಹೆಚ್ಚು ಪರಿಹಾರ ಘೋಷಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರವು ಯಾವುದೇ ಪೂರ್ವಭಾವಿ ಕ್ರಮ ತೆಗೆದುಕೊಂಡಿಲ್ಲ. ಕೇಂದ್ರದ ಹಣಕ್ಕಾಗಿ ಕಾಯುತ್ತಿದೆ" ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಪರಿಹಾರ ವಿತರಣೆಯಲ್ಲಿ ವಿಫಲ

ಮಳೆ ಪೀಡಿತ ಜಿಲ್ಲೆಗಳ ಜನರ ಸಂಕಷ್ಟ ನಿಭಾಯಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, ಭಾರತೀಯ ಜನತಾ ಪಕ್ಷ ತನ್ನ ಹಿರಿಯ ನಾಯಕರು ಸೋಮವಾರದಿಂದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಪಕ್ಷವು ಎರಡು ತಂಡಗಳನ್ನು ರಚಿಸಿದೆ. ಒಂದು ತಂಡದ ಸಾರಥ್ಯವನ್ನು ನಾನು ವಹಿಸಲಿದ್ದೇನೆ. ಮತ್ತೊಂದು ತಂಡವು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಯಾವ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ?

ಬಿ.ವೈ. ವಿಜಯೇಂದ್ರ ನೇತೃತ್ವದ ತಂಡದಲ್ಲಿ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಇತರರು ಇರಲಿದ್ದಾರೆ. 

ಆರ್. ಅಶೋಕ ನೇತೃತ್ವದ ತಂಡದಲ್ಲಿ ಮಾಜಿ ಸಿಎಂ ಮತ್ತು ಸಂಸದ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಟಿ. ರವಿ, ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಸೇರಿದಂತೆ ಇರಲಿದ್ದಾರೆ. ಈ ತಂಡಗಳೊಂದಿಗೆ ಬಿಜೆಪಿಯ ಜಿಲ್ಲಾ ಘಟಕಗಳ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ.  

ಭಾರೀ ಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ 

ಉತ್ತರ ಕರ್ನಾಟಕದಲ್ಲಿ ಕಳೆದ 8 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭೀಮಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿ ಸೊಲ್ಲಾಪುರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.  

ಉತ್ತರ ಕರ್ನಾಟಕವು ಇತ್ತೀಚಿನ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.  ಆಗಸ್ಟ್‌ನಲ್ಲಿ 195 ಮಿ.ಮೀ ಮಳೆಯಾಗಿದೆ. ಸೆಪ್ಟೆಂಬರ್‌ 28 ರವರೆಗೆ ಸಾಮಾನ್ಯಕ್ಕಿಂತ ಶೇ 32 ರಷ್ಟು ಮಳೆಯಾಗಿದೆ. 

ಕ್ರಮ ಕೈಗೊಳ್ಳಲು ಸಿ.ಎಂ ಸೂಚನೆ 

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ನೆರೆ ಹಾನಿಗೆ ತಕ್ಷಣದಿಂದಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಬೇಕೆಂದು ಸೂಚಿಸಲಾಗಿದೆ.  

Tags:    

Similar News