ಸುರಂಗ ಮಾರ್ಗ ಯೋಜನೆ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ದೊಡ್ಡ ಉದಾಹರಣೆ: ತೇಜಸ್ವಿ ಸೂರ್ಯ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಾರುಗಳನ್ನಿಟ್ಟುಕೊಂಡವರು ಮಾತ್ರ ಓಡಾಡುವಂಥ ಸುರಂಗ ಮಾರ್ಗ ಬೇಕೋ ಎಲ್ಲರೂ ಓಡಾಡಬಹುದಾದ ಮೆಟ್ರೋ ಬೇಕೋ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.;
ತೇಜಸ್ವಿ ಸೂರ್ಯ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಅತಿ ದೊಡ್ಡ ಒಂದು ಉದಾಹರಣೆಯೇ, ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರು ಸುರಂಗ ಮಾರ್ಗ ರಸ್ತೆ ಯೋಜನೆ ಎಂದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಈವರೆಗೆ ಯಾವುದೇ ಅತ್ಯುತ್ತಮ ಮೂಲ ಸೌಕರ್ಯ ಯೋಜನೆಗಳನ್ನು ಕೊಟ್ಟಿಲ್ಲ. ಅದರ ಬದಲಿಗೆ, ಪಕ್ಷದ ಫಂಡ್ ತುಂಬಿಸಲು ಹಣ ಮಾಡುವುದಕ್ಕೆ ಒಂದು ಮಾಧ್ಯಮವನ್ನಾಗಿ ಮಾತ್ರ ಬೆಂಗಳೂರನ್ನು ಕಾಂಗ್ರೆಸ್ ನೋಡುತ್ತಿದೆ ಎಂದು ಆರೋಪ ಮಾಡಿದರು.
ಸುರಂಗ ಮಾರ್ಗ ರಸ್ತೆ ಯಾಕೆ ಅನವಶ್ಯಕ ಮತ್ತು ಅದರಿಂದ ಜನಸಾಮಾನ್ಯರಿಗೆ ಯಾವ ರೀತಿಯಲ್ಲಿ ಉಪಯೋಗವಿಲ್ಲ ಎಂಬುವುದನ್ನು ಅಂಕಿ ಅಂಶಗಳು ಹಾಗೂ ಇತರ ವಿಚಾರಗಳನ್ನು ವಿವರವಾಗಿ ಮಂಡಿಸಿದರು. ಟನಲ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರ ಡಿಪಿಆರ್ ಗಮನಿಸಿದರೆ ಸಾಕಷ್ಟು ಅಕ್ರಮ ನಡೆದಿರುವುದು ಕಂಡುಬರುತ್ತದೆ. ಇದನ್ನು ಕಾರುಗಳಿಗಷ್ಟೇ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಅಂಕಿಅಂಶಗಳನ್ನು ಬಿಚ್ಚಿಟ್ಟ ತೇಜಸ್ವಿ ಸೂರ್ಯ
18 ಕಿಲೋ ಮೀಟರ್ ಟನಲ್ ರಸ್ತೆಯಲ್ಲಿ ಗಂಟೆಗೆ 600 ರಿಂದ 1600 ಜನ ಓಡಾಡಬಹುದು. ಅದೇ ಬೈಕ್ಗಳಿಗೆ ಅವಕಾಶ ಕೊಟ್ಟರೆ 7,500 ಜನ ಓಡಾಡಬಹುದು. ಅದೇ ಜಾಗದಲ್ಲಿ ಮೆಟ್ರೋ ಮಾಡಿದರೆ ಗಂಟೆಗೆ 25000 ಜನ ಓಡಾಡಬಹುದು. ಈಗ ಹೇಳಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಾರುಗಳನ್ನಿಟ್ಟುಕೊಂಡವರು ಮಾತ್ರ ಓಡಾಡುವಂಥ ಸುರಂಗ ಮಾರ್ಗ ಬೇಕೋ ಎಲ್ಲರೂ ಓಡಾಡಬಹುದಾದ ಮೆಟ್ರೋ ಬೇಕೋ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದರು.
ಸುರಂಗ ಮಾರ್ಗ ರಸ್ತೆ ಕೇವಲ ಶ್ರೀಮಂತರಿಗಾಗಿ ಅಷ್ಟೇ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ, ಮಧ್ಯಮವರ್ಗದವರಿಗೆ ಏನೂ ಪ್ರಯೋಜನವಿಲ್ಲ. ಇದೆಂಥಾ ‘ಆರ್ಥಿಕ ಅಸ್ಪೃಶ್ಯತೆ’ ಎಂದು ಸೂರ್ಯ ಪ್ರಶ್ನಿಸಿದರು.
ಕಟ್ ಆ್ಯಂಡ್ ಪೇಸ್ಟ್ ಮಾಡಲು 9.5 ಕೋಟಿ ರೂ
ಸುರಂಗ ಮಾರ್ಗ ಯೋಜನೆ ಸಂಬಂಧ ಫೀಸಿಬಿಲಿಟಿ ರಿಪೋರ್ಟ್ ತಯಾರಿಸಲು ಸಿನರ್ಜಿ ಎಂಜಿನಿಯರಿಂಗ್ ಎಂಬ ಕಂಪನಿಗೆ (ಲಯನ್ ಗ್ರೂಪ್) ಹೊಣೆ ವಹಿಸಿದರು. ಆಲ್ಟಿ ನಾಕ್ ಕಂಪನಿ ಮೂಲಕ ಡಿಪಿಆರ್ ಮಾಡಲು ವಹಿಸಿದರು. ಈ ಕಂಪನಿ ಮಧ್ಯ ಪ್ರದೇಶದಲ್ಲಿ ಸರಿಯಾಗಿ ಕೆಲಸ ಮಾಡದೇ ಡಿಬಾರ್ ಆದ ಕಂಪನಿ. ಅಂಥ ಕಂಪನಿಯಿಂದ ಇವರು ಡಿಪಿಆರ್ ಮಾಡಿಸಿದರು. ಬಿಬಿಎಂಪಿ ನಿಯಮದ ಪ್ರಕಾರ ಇಂಥ ಕಂಪನಿಗಳಿಗೆ ಅವಕಾಶ ನೀಡಬಾರದು. ಆದರೆ, ಅಂಥ ಕಂಪನಿಗೇ ಡಿಪಿಆರ್ ಹೊಣೆ ನೀಡಲಾಗಿದೆ. ಡಿಪಿಆರ್ ಮಾಡಿದ ಕಂಪನಿ ರಾಡಿಕ್ ಕನ್ಸಲ್ಟಂಟ್. ಈ ಕಂಪನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮ ಎಸಗಿ ಸಿಕ್ಕಿಹಾಕಿಕೊಂಡು ಎಸಿಬಿ ತನಿಖೆ ಎದುರಿಸುತ್ತಿದೆ. ಈ ಕಂಪನಿಗಳು ಬೇರೆ ಕಡೆಯಿಂದ ಮಾಹಿತಿ ಕದ್ದು ಕಾಪಿ, ಪೇಸ್ಟ್ ಮಾಡಿದವು. ಅದಕ್ಕಾಗಿ 9.5 ಕೋಟಿ ರೂ. ಖರ್ಚು ಮಾಡಲಾಯಿತು ಎಂದು ಸೂರ್ಯ ಹೇಳಿದರು.
ಬಿಜೆಪಿಯಿಂದ ಬೃಹತ್ ಹೋರಾಟ
ಈ ಟನಲ್ ರಸ್ತೆ ಯೋಜನೆ ಅಕ್ರಮದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳುತ್ತೇವೆ. ಇದು ಸಾರ್ವಜನಿಕರ ಹಣದ ಲೂಟಿ. ಇದರ ವಿರುದ್ಧ ಬೃಹತ್ ಹೋರಾಟವನ್ನು ನಾವು ಕೈಗೊಳ್ಳುತ್ತೇವೆ ಎಂದು ಸೂರ್ಯ ಹೇಳಿದರು.
‘ಮೆಟ್ರೋ ದರ ಇಳಿಕೆಗೂ ಹೋರಾಟ’
ಇದುವರೆಗೆ ಮೆಟ್ರೋ ದರ ಏರಿಕೆ ಕುರಿತು ಹೋರಾಟ ಮಾಡಲಿಲ್ಲ. ಈ ಹೋರಾಟವನ್ನೂ ಯಶಸ್ವಿಯಾಗಿ ಮಾಡುತ್ತೇವೆ. ಮೆಟ್ರೋ ದರಕ್ಕೆ ಹಾಂಕಾಂಗ್ ಸೇರಿದಂತೆ ಬೇರೆ ದೇಶ, ವಿದೇಶ ಪ್ರವಾಸ ಮಾಡಿ ಬರುತ್ತೇವೆ ಎಂದರು. ಬಂದ ಬಳಿಕ ವರದಿ ಕೊಡುತ್ತೇವೆ ಎಂದು ಈವರೆಗೂ ಕೊಟ್ಟಿಲ್ಲ. ನಾನು ಈ ಬಗ್ಗೆ ದಾವೆ ಹಾಕಿದ್ದೇನೆ. ಅದರ ಉತ್ತರ ಪಡೆಯವವರೆಗೂ ಹೋರಾಟ ನಿಲ್ಲಲ್ಲ. ಸದ್ಯದಲ್ಲೇ ಕೋರ್ಟ್ ತೀರ್ಪು ಕೊಡಲಿದೆ. ಮೆಟ್ರೋ ದರ ಕಡಿಮೆ ಮಾಡಿಸಲು ಹೋರಾಟ ಮಾಡಿಯೇ ಮಾಡುತ್ತೇವೆ. ಟನಲ್ ಕಾಮಗಾರಿ ಶೇ 40 ಪರ್ಸೆಂಟ್ ಕಾಮಗಾರಿ ಅಲ್ಲ, ಇದು ಶೇ 400, 4 ಸಾವಿರ ಪರ್ಸೆಂಟ್ ಕಾಮಗಾರಿ. ಇದನ್ನು ಎಷ್ಟು ಪರ್ಸೆಂಟ್ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಈಗ ಮೆಟ್ರೋ ಇರುವುದು ಕೇವಲ 78 ಕಿ.ಮೀ. ಮಾತ್ರ. ಮುಂದಿನ 5 ವರ್ಷಗಳಲ್ಲಿ 317 ಕಿ.ಮೀ. ಇರಬೇಕು. ನಾಲ್ಕು ವರ್ಷಗಳಿಂದ ಹಳದಿ ಮಾರ್ಗದ ಮೆಟ್ರೋ ಸಿದ್ಧವಿದೆ, ನೀವು ಸಾರ್ವಜನಿಕರಿಗೆ ಮುಕ್ತ ಮಾಡಿಲ್ಲ. ಟನಲ್ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದೀರಿ ಎಂದು ಕಿಡಿ ಕಾರಿದರು.
100 ಕಿ.ಮೀ. ಹೊಸ ಫ್ಲೈ ಓವರ್ ಮಾಡಬೇಕು ಎನ್ನುತ್ತಿದ್ದೀರಿ. ನಿಂತಿರುವ ಮೇಲ್ಸೇತುವೆ ಕಾಮಗಾರಿಗಳನ್ನು ಮೊದಲು ಮುಗಿಸಿ. ನಮ್ಮ ಕ್ಷೇತ್ರದಲ್ಲಿರುವ ಈಜಿಪುರದ ಫ್ಲೈ ಓವರ್ ಮೊದಲು ಪೂರ್ಣ ಮಾಡಿ. 100 ಕಿ.ಮೀ. ಫ್ಲೈ ಓವರ್ ಮಾಡಬೇಕಾದರೆ 800 ವರ್ಷಗಳು ಬೇಕು. ಈಗ ಪ್ರಾಜೆಕ್ಟ್ ಮಾಡಿದರೆ ಮೊಮ್ಮಕ್ಕಳ ಕಾಲಕ್ಕೆ ಮುಗಿಯಲಿದೆ, ಆ ರೀತಿ ಇದೆ ಇವರ ಕೆಲಸ. ಈಜಿಪುರ ಫ್ಲೈ ಓವರ್ ಕಾಮಗಾರಿಯ ರೀತಿ ಮುಂದುವರಿಸಿದರೆ 800 ವರ್ಷ ಬೇಕು. ಇದನ್ನೇ ಮಾಡಲಾಗದವರು, ಸುರಂಗ ರಸ್ತೆ ಮಾಡಲು ಹೊರಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.