ಹೈಕೋರ್ಟ್‌ ನ್ಯಾಯಮೂರ್ತಿಗಳ ವರ್ಗಾವಣೆ| ಮಾಹಿತಿ ನೀಡಲು ಸುಪ್ರೀಂಕೋರ್ಟ್ ನಿರಾಕರಣೆ

ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ದೇಶದ ವಿವಿಧ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿ ಹೈಕೋರ್ಟ್ ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಉಮಾಪತಿ. ಎಸ್‌ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.;

Update: 2025-05-21 10:22 GMT

ಸುಪ್ರೀಂ ಕೋರ್ಟ್‌ 

ಕರ್ನಾಟಕ ಹೈಕೋರ್ಟ್ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಕುರಿತು ಮಾಹಿತಿ ಒದಗಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿ ಕೋರಿ ಹೈಕೋರ್ಟ್ ವಕೀಲ ಉಮಾಪತಿ. ಎಸ್‌ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. 

ನ್ಯಾಯಮೂರ್ತಿಗಳ ವರ್ಗಾವಣೆ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್‌ 8 (ಮಾಹಿತಿ ಬಹಿರಂಗಪಡಿಸಲು ವಿನಾಯ್ತಿ)  ಹಾಗೂ ಸೆಕ್ಷನ್‌ 11 ರಡಿ ವಿವರಗಳನ್ನು ನೀಡಲು ನಿರ್ಬಂಧವಿದೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಉತ್ತರ ನೀಡಿದ್ದಾರೆ.  

ಅರ್ಜಿಯಲ್ಲಿ ಕೋರಿರುವ ಮಾಹಿತಿಯು ನ್ಯಾಯಾಂಗ ವರ್ಗಾವಣೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕುರಿತ ಚರ್ಚೆಗಳಿಗೆ ಆಸ್ಪದ ನೀಡುತ್ತಿದೆ. ಇಂತಹ ಮಹತ್ವದ ನಿರ್ಧಾರಗಳ ಬಗ್ಗೆ ಸಾರ್ವಜನಿಕವಾಗಿ ಕಾರಣ ಬಹಿರಂಗಪಡಿಸದಿರುವುದು ಅನುಮಾನ ಹುಟ್ಟಿಸುತ್ತದೆ ಎಂದು ವಕೀಲ ಉಮಾಪತಿ. ಎಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನ್ಯಾಯಾಂಗ ವರ್ಗಾವಣೆಗಳ ನೀತಿ, ಮಾನದಂಡ, ಹೊಣೆಗಾರಿಕೆಯಲ್ಲಿ ಪಾರದರ್ಶಕತೆಗೆ ಸಾರ್ವಜನಿಕರಿಂದ ಒತ್ತಡ ಹೆಚ್ಚುತ್ತಿದೆ. ಅದರಂತೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಯ ಕುರಿತು ಮಾಹಿತಿ ಕೋರಿದ್ದೆವು. ಆದರೆ, ಸುಪ್ರೀಂಕೋರ್ಟ್ ಮಾಹಿತಿ ನಿರಾಕರಿಸಿರುವುದು ಮಾಹಿತಿ ಹಕ್ಕು ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುವ ಆತಂಕವಿದೆ ಎಂದು ಅವರು ತಿಳಿಸಿದ್ದಾರೆ. 

Tags:    

Similar News