ಕಾವೇರಿ ವನ್ಯಜೀವಿ ಧಾಮದಲ್ಲಿ ದುರಂತ: ತಾಯಿಯಿಂದ ಬೇರ್ಪಟ್ಟ ಎರಡು ಹುಲಿ ಮರಿಗಳ ಸಾವು
ಕಾವೇರಿ ವನ್ಯಜೀವಿ ಧಾಮದಲ್ಲಿ ಎರಡು ಮರಿಗಳು ಮೃತಪಟ್ಟಿರುವುದು ವನ್ಯಜೀವಿ ಪ್ರಿಯರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.;
ಹುಲಿ ಮರಿಗಳ ಸಾವು
ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಸುಮಾರು 15 ದಿನಗಳ ಎರಡು ಹುಲಿ ಮರಿಗಳು ಹಸಿವು ಮತ್ತು ನಿತ್ರಾಣದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ. ಈ ಘಟನೆಯು ಜಿಲ್ಲೆಯಲ್ಲಿ ಹುಲಿಗಳ ಸರಣಿ ಸಾವಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿ ಮರಿಯ ಕಳೇಬರಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 10-15 ದಿನಗಳ ಹಿಂದೆಯೇ ಈ ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅವುಗಳಿಗೆ ಸೂಕ್ತ ಆಹಾರ ಮತ್ತು ರಕ್ಷಣೆ ಸಿಗದ ಕಾರಣ ಹಸಿವಿನಿಂದ ಸಾವನ್ನಪ್ಪಿವೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.
ವಿಷಯ ತಿಳಿದ ತಕ್ಷಣ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಮತ್ತು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ನಿರಂಜನ್ ಸೇರಿದಂತೆ ಹಿರಿಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಕಳೆದ ತಿಂಗಳು ಹೂಗ್ಯಂ ಅರಣ್ಯ ವಲಯದಲ್ಲಿ ಐದು ಹುಲಿಗಳು ಸಾವನ್ನಪ್ಪಿದ್ದವು. ಇದೀಗ ಕಾವೇರಿ ವನ್ಯಜೀವಿ ಧಾಮದಲ್ಲಿ ಎರಡು ಮರಿಗಳು ಮೃತಪಟ್ಟಿರುವುದು ವನ್ಯಜೀವಿ ಪ್ರಿಯರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದು ಅರಣ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.