ಕಲುಷಿತ ಆಹಾರ ಸೇವನೆ ಶಂಕೆ, ಒಂದೇ ಕುಟುಂಬದ ತಂದೆ-ಮಕ್ಕಳು ಸೇರಿ ಮೂವರ ಸಾವು
ಕುಟುಂಬದವರೆಲ್ಲ ಸೋಮವಾರ ರಾತ್ರಿ ಚವಳಿಕಾಯಿ ಪಲ್ಯ, ರೊಟ್ಟಿ, ಅನ್ನ, ಸಾಂಬಾರ್ ಸೇವನೆ ಮಾಡಿದ್ದರು. ಊಟ ಮಾಡಿ ಮಲಗಿದ್ದ 6 ಜನರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.;
ಸಾಂದರ್ಭಿಕ ಚಿತ್ರ
ಜಿಲ್ಲೆಯ ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿದ ನಂತರ ಹೊಟ್ಟೆನೋವು ಕಾಣಿಸಿಕೊಂಡು ಒಂದೇ ಕುಟುಂಬದ ತಂದೆ ಮತ್ತು ಇಬ್ಬರು ಪುತ್ರಿಯರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಮುಂಜಾನೆ ವರದಿಯಾಗಿದೆ.
ಮೃತರನ್ನು ರಮೇಶ್ (35), ಅವರ ಮಕ್ಕಳಾದ ನಾಗಮ್ಮ (8) ಮತ್ತು ದೀಪಾ (6) ಎಂದು ಗುರುತಿಸಲಾಗಿದೆ. ರಮೇಶ್ ಅವರ ಪತ್ನಿ ಪದ್ಮಾ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಇನ್ನಿಬ್ಬರು ಮಕ್ಕಳಾದ ಕೃಷ್ಣ ಮತ್ತು ಚೈತ್ರಾ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ರಾತ್ರಿ ಕುಟುಂಬದವರೆಲ್ಲರೂ ಚವಳಿಕಾಯಿ ಪಲ್ಯ, ರೊಟ್ಟಿ, ಅನ್ನ ಮತ್ತು ಸಾಂಬಾರ್ ಊಟ ಮಾಡಿದ್ದರು. ಊಟವಾದ ಬಳಿಕ ಎಲ್ಲ ಆರು ಮಂದಿಗೂ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವಿನಿಂದ ನರಳುತ್ತಿದ್ದ ಅವರನ್ನು ಮುಂಜಾನೆ 4 ಗಂಟೆ ಸುಮಾರಿಗೆ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ರಮೇಶ್ ಮತ್ತು ನಾಗಮ್ಮ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಪುತ್ರಿ ದೀಪಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಈ ಘಟನೆಯು ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆಹಾರದಲ್ಲಿ ವಿಷ ಬೆರೆತಿತ್ತೇ ಅಥವಾ ಆಹಾರವೇ ಕಲುಷಿತಗೊಂಡಿತ್ತೇ ಎಂಬ ಬಗ್ಗೆ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.