ಬೆಂಗಳೂರಿಗೆ ಬಂದು ಬೆಳೆದಿದ್ದನ್ನು ಮರೆತು ಟ್ವಿಟ್ ಮಾಡುತ್ತಿದ್ದಾರೆ: ಉದ್ಯಮಿಗಳ ವಿರುದ್ಧ ಡಿಕೆಶಿ ಆಕ್ರೋಶ
ಬೆಂಗಳೂರಿನಲ್ಲಿ ಉದ್ಯಮ ಆರಂಭಿಸಿ ದೊಡ್ಡದಾಗಿ ಬೆಳೆದಿದ್ದಾರೆ. ಯಾವ ಹಂತದಿಂದ ಯಾವ ಹಂತಕ್ಕೆ ಬೆಳೆದಿದ್ದೇವೆ ಎಂಬುದನ್ನು ಮರೆತು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ರಸ್ತೆ ಗುಂಡಿ ಮತ್ತು ಕಸದ ವಿಚಾರವಾಗಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಸಮರ ಮುಂದುವರಿದಿದೆ.
"ಬೆಂಗಳೂರಿಗೆ ಬಂದು ಯಾವ ಹಂತಕ್ಕೆ ಬೆಳೆದಿದ್ದಾರೆ ಎಂಬುದನ್ನು ಮರೆತು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಿರಣ್ ಮಜುಮ್ದಾರ್ ಮತ್ತಿತರರ ಟೀಕೆಗೆ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಉದ್ಯಮ ಆರಂಭಿಸಿ ದೊಡ್ಡ ಮಟ್ಟಕ್ಕೆ ಬೆಳೆದವರು, ಈಗ ಬೆಂಗಳೂರಿನ ಬಗ್ಗೆ ಟೀಕೆ ಮಾಡಿ ಟ್ವೀಟ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೋರಮಂಗಲದ ವೀರಯೋಧ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಡಿಗೆ ಅಭಿಯಾನದ ಅಂಗವಾಗಿ ನಾಗರಿಕರೊಂದಿಗೆ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿ ಮಾತನಾಡಿದರು.
ಬೆಂಗಳೂರಿಗೆ ಬಂದು ಬೆಳೆದಿರುವವರು ಹಿಂದೆ ಹೇಗಿದ್ದೆವು, ಪ್ರಸ್ತುತ ಹೇಗಿದ್ದೇವೆ ಎಂಬುದನ್ನು ಮರೆತು ಟ್ವೀಟ್ ಮಾಡುತ್ತಿದ್ದಾರೆ. ನಾವು ನಮ್ಮ ಮೂಲ ಮರೆಯಬಾರದು, ಮೂಲ ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಾನು ನಂಬಿದ್ದೇನೆ. ಬೆಂಗಳೂರಿಗೆ ಸುಮಾರು 70 ಲಕ್ಷ ಮಂದಿ ಹೊರರಾಜ್ಯದಿಂದ ಬಂದು ಜೀವನ ಕಟ್ಟಿಕೊಂಡಿದ್ದಾರೆ. ಕೆಲವರು ನಗರದಲ್ಲಿ ಉದ್ಯಮ ಆರಂಭಿಸಿ ದೊಡ್ಡದಾಗಿ ಬೆಳೆದಿದ್ದಾರೆ. ಯಾವ ಹಂತದಿಂದ ಬೆಳೆದಿದ್ದೇವೆ ಎಂಬುದನ್ನು ಮರೆತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ನಗರದಾದ್ಯಂತ ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂಬುದನ್ನು ಸಾರ್ವಜನಿಕರೇ ಫೋಟೊ ತೆಗೆದು ಅದನ್ನು ಮೊಬೈಲ್ ಆ್ಯಪ್ ಮೂಲಕ ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ರೂಪಿಸಿದ್ದೇವೆ. ಟೀಕೆ ಹಾಗೂ ವಿಮರ್ಶೆಗಳನ್ನು ಸ್ವಾಗತಿಸುತ್ತೇವೆ. ಟೀಕೆಗಳು ಇದ್ದಾಗಲೇ ಪ್ರಜಾಪ್ರಭುತ್ವಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಆದರೆ ಕೆಲವರು ವಿಕೋಪಕ್ಕೆ ಹೋಗಿ ಟೀಕೆ ಮಾಡುತ್ತಿದ್ದಾರೆ. ಅಂತಹವರ ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ನಮಗೆ ಅವಕಾಶ ನೀಡಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಯಿತು. ಇತಿಹಾಸ ಗಮನಿಸಿದರೆ ನಾವು ಮಾಡಿದಷ್ಟು ತೀರ್ಮಾನ ಯಾರೂ ಸಹ ಮಾಡಿಲ್ಲ. ನಾವು ಮಾಡಿದ ಕೆಲಸಗಳ ಬಗ್ಗೆ ಸಾರ್ವಜನಿಕರು, ವಿರೋಧ ಪಕ್ಷದವರಿಗೆ ಎಲ್ಲರಿಗೂ ತಿಳಿದಿದೆ. ಇಡೀ ದೇಶದಲ್ಲಿ ಸಮಸ್ಯೆಯಿದೆ. ಅವರೆಲ್ಲಾ ಮಾಧ್ಯಮಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ. ನಾವು ಮುಕ್ತವಾಗಿ ಬಿಟ್ಟಿದ್ದೇವೆ. ದೆಹಲಿ, ಮುಂಬೈ ಸೇರಿದಂತೆ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ರಸ್ತೆಗಳ ಸಮಸ್ಯೆ ತೋರಿಸುತ್ತೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವಾಗ ಪ್ರತಿಪಕ್ಷದವರು ಸಹ ಸಹಕಾರ ನೀಡಿದ್ದಾರೆ. ಈ ಮೊದಲು 198 ವಾರ್ಡ್ ಗಳಿದ್ದವು. ಈಗ ಐದು ಪಾಲಿಕೆಗಳಿಂದ 369 ವಾರ್ಡ್‌ಗಳಾಗಿವೆ. ಇಷ್ಟು ಬೇಗ ಪಾಲಿಕೆ ವಿಭಜನೆಯಿಂದ ಹಿಡಿದು ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವೇ ಎಂದು ದೇಶದಾದ್ಯಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಜನರ ಬಳಿಗೆ ಸರ್ಕಾರ ಹೋಗಬೇಕು ಎಂದು ಐದು ಪಾಲಿಕೆಗಳನ್ನು ಮಾಡಲಾಗಿದೆ. ಬಿ ಖಾತಾದಿಂದ ಎ ಖಾತೆಗೆ ಬದಲಾವಣೆ ಮಾಡಿಕೊಳ್ಳಲು ಸರ್ಕಾರ ಅತ್ಯುತ್ತಮ ಅವಕಾಶ ನೀಡಿದೆ. ಸಿಎ ನಿವೇಶನಗಳ ಬಗ್ಗೆಯೂ ಪ್ರತ್ಯೇಕ ನೀತಿ ತರಲಾಗುತ್ತಿದೆ. ಗೊಂದಲ ಉಂಟಾಗುವುದು ಬೇಡವೆಂದು ನಗರ ಯೋಜನೆ ಕೆಲಸವನ್ನು ಬಿಡಿಎಯಿಂದ ಜಿಬಿಎಗೆ ನೀಡಲಾಗಿದೆ. ದೊಡ್ಡ ಯೋಜನೆಗಳನ್ನು ಸರ್ಕಾರ ಮಾಡಿದರೆ. ಚಿಕ್ಕ ಕೆಲಸಗಳನ್ನು ಪಾಲಿಕೆಗಳು ಮಾಡುತ್ತವೆ. ನಗರದಲ್ಲಿ ನಿತ್ಯ ಮೂರು ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಜನಸಂಖ್ಯೆ 1.40 ಕೋಟಿ ಮುಟ್ಟಿದೆ. ಉದ್ಯೋಗ, ಶಿಕ್ಷಣ, ವಹಿವಾಟು, ಉದ್ದಿಮೆ ಹೀಗೆ ಅನೇಕ ಕೆಲಸಗಳಿಗಾಗಿ ಬೆಂಗಳೂರನ್ನು ಅವಲಂಬಿಸಿದ್ದಾರೆ ಎಂದಿದ್ದಾರೆ.
ಕಿರಣ್ ಮುಜಮ್ದಾರ್ ಶಾ ಟ್ವೀಟ್ ಏನು?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕೆಗಳಿಗೆ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಸಚಿವರ ಹೇಳಿಕೆಗಳು ವಾಸ್ತವ ಅಲ್ಲ. ನಾನು ಮತ್ತು ಉದ್ಯಮಿ ಟಿ.ವಿ.ಮೋಹನ್‌ದಾಸ್ ಪೈ ಇಬ್ಬರೂ ನಮ್ಮ ನಗರದಲ್ಲಿನ ಮೂಲಸೌಕರ್ಯಗಳು ಹದಗೆಡುತ್ತಿರುವುದನ್ನು ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿಯೂ ಟೀಕಿಸಿದ್ದೇವೆ. ನಮ್ಮ ಕಾರ್ಯಸೂಚಿಯು ಸ್ಪಷ್ಟವಾದ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಪುನಃಸ್ಥಾಪಿಸುವುದು ಮಾತ್ರ ಆಗಿದೆ ಎಂದು ಹೇಳಿದ್ದಾರೆ.