ಹಿಂದುಳಿದವರು ಸಿಎಂ ಆಗಬಾರದು ಎನ್ನುವುದು ಬಿಜೆಪಿಯ ಸಿದ್ಧಾಂತ ಎಂದ ಸಿದ್ದರಾಮಯ್ಯ
ಹಿಂದುಳಿದ ಸಮುದಾಯದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ. ಅದಕ್ಕೇ ಯಾವುದೇ ತಪ್ಪಿಲ್ಲದಿದ್ದರೂ ನನ್ನ ವಿರುದ್ಧ ಬಿಜೆಪಿಯವರು ಭಯಾನಕ ಷಡ್ಯಂತ್ರ ರಚಿಸಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಷಡ್ಯಂತ್ರ ಗೆಲ್ಲುವುದಿಲ್ಲʼʼ ಎಂದು ಎಚ್ಷರಿಕೆ ಸಿಎಂ ನೀಡಿದರು.
ನಿಮ್ಮ (ಜನರ) ಆಶೀರ್ವಾದ ಇರುವವರೆಗೂ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಗೋಕಾಕ ತಾಲೂಕಿನ ಕೌಜಲಗಿಯಲ್ಲಿ ಆಯೋಜಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ರಾಯಣ್ಣ ಕೋಟೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ʻʻಹಿಂದುಳಿದ ಸಮುದಾಯದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ. ಅದಕ್ಕೇ ಯಾವುದೇ ತಪ್ಪಿಲ್ಲದಿದ್ದರೂ ನನ್ನ ವಿರುದ್ಧ ಬಿಜೆಪಿಯವರು ಭಯಾನಕ ಷಡ್ಯಂತ್ರ ರಚಿಸಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಷಡ್ಯಂತ್ರ ಗೆಲ್ಲುವುದಿಲ್ಲ," ಎಂದು ಎಚ್ಷರಿಕೆ ನೀಡಿದರು.
ʻʻರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ ಅತ್ಯಂತ ಪರಾಕ್ರಮಿ. ಬ್ರಿಟಿಷರು ರಾಣಿ ಚನ್ನಮ್ಮನ ಆಸ್ಥಾನದ ಮೇಲೆ ದಾಳಿ ನಡೆಸಿದಾಗ ರಾಯಣ್ಣನ ಹೋರಾಟದಿಂದ, ಶೌರ್ಯದಿಂದ ಗೆಲುವು ಸಾಧ್ಯವಾಯಿತು. ಎರಡನೇ ಯುದ್ಧದಲ್ಲಿ ಸೋಲಾದರೂ ಬ್ರಿಟಿಷರ ಕೈಗೆ ಸಿಗದೆ ತಪ್ಪಿಸಿಕೊಂಡ ರಾಯಣ್ಣ ಗೆರಿಲ್ಲಾ ಸೈನ್ಯ ಕಟ್ಟಿ, ಗೆರಿಲ್ಲಾ ಯುದ್ಧ ಮಾಡಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದರು. ಇದರಿಂದ ಬ್ರಿಟಿಷರು ನೆಮ್ಮದಿ ಕೆಡಿಸಿಕೊಂಡಿದ್ದರು. ಆದರೆ ನಮ್ಮವರೇ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟರು. ನಮ್ಮವರ ದೇಶದ್ರೋಹದಿಂದ ರಾಯಣ್ಣ ಬ್ರಿಟಿಷರ ವಶವಾದರು. ರಾಯಣ್ಣ ಈಜಾಡುವಾಗ ಅವರ ಕೈಯಲ್ಲಿ ಆಯುಧ ಇರುವುದಿಲ್ಲ . ಈ ವೇಳೆ ಅವರನ್ನು ಬಂಧಿಸುವುದು ಸುಲಭ ಎಂದು ಬ್ರಿಟಿಷರಿಗೆ ಐಡಿಯಾ ಕೊಟ್ಟು ಬಂಧನಕ್ಕೆ ಕಾರಣರಾದವರು ನಮ್ಮವರೇʼʼ ಎಂದರು.
ʻʻಇಂತಹ ದೇಶದ್ರೋಹಿಗಳು ನಮ್ಮಲ್ಲೇ ಇದ್ದಾರೆ. ಈ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಷಡ್ಯಂತ್ರ ಮಾಡುತ್ತಲೇ ಇದ್ದಾರೆ. ಆದರೆ ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಕೆಳಗಿಳಿಸಲು ಸಾಧ್ಯವಿಲ್ಲ,ʼʼ ಎಂದು ಸಿಎಂ ಹೇಳಿದರು.