Reels Reveal | ಗಾಂಜಾ ಸುಳಿವು ನೀಡಿ ದಂಪತಿಗೆ ಕೋಳ ತೊಡಿಸಿದ ರೀಲ್ಸ್!
54 ಗ್ರಾಂ. ಗಾಂಜಾ ಸೊಪ್ಪನ್ನು ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಊರ್ಮಿಳಾ ಹಾಗೂ ಸಾಗರ್ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ʻರೀಲ್ಸ್’ ಮಾಡೋ ಭರದಲ್ಲಿ ದಂಪತಿಗಳೇ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಈ ಘಟನೆ ನಡೆದಿದ್ದು, ಬೆಂಗಳೂರಿನ ಸದಾಶಿವನಗರ ಠಾಣೆಯ ವ್ಯಾಪ್ತಿಯಲ್ಲಿ. ಒಡಿಶಾ ಮೂಲದ ಊರ್ಮಿಳಾ ಕುಮಾರಿ (33), ಸಾಗರ್ ಗುರಂಗ್ (37) ಎಂಬ ದಂಪತಿ ತಮ್ಮ ಮನೆಯ ಬಾಲ್ಕನಿಯಲ್ಲಿ ಗಾಂಜಾ ಗಿಡ ಬೆಳೆಸಿದ್ದರು. ಇತ್ತೀಚಿಗೆ ಊರ್ಮಿಳಾ ಮನೆಯ ಬಾಲ್ಕನಿಯಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಳು. ಊರ್ಮಿಳಾ ಮಾಡಿದ್ದ ರೀಲ್ಸ್ನಲ್ಲಿ ಗಾಂಜಾ ಗಿಡ ಕಾಣಿಸಿಕೊಂಡಿತ್ತು. ಗಾಂಜಾ ಗಿಡ ಕುರಿತು ವ್ಯಕ್ತಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದ.
ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದಾಗ ಗಾಂಜಾ ಗಿಡ ಪತ್ತೆಯಾಗಿದೆ. 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ದಂಪತಿ ಗಾಂಜಾ ಗಿಡ ಬೆಳೆಸಿದ್ದರು. ಸ್ಥಳ ಪರಿಶೀಲನೆ ವೇಳೆ ದಂಪತಿಯ ಈ ತಂತ್ರಗಾರಿಕೆ ತಿಳಿದ ಪೊಲೀಸರು, 54 ಗ್ರಾಂ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.
ಊರ್ಮಿಳಾ ಹಾಗೂ ಸಾಗರ್ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಗಾಂಜಾ ಪ್ರಮಾಣ ಕಡಿಮೆ ಇದ್ದ ಕಾರಣ ಠಾಣಾ ಜಾಮೀನಿನ ಮೇರೆಗೆ ಗಂಡ-ಹೆಂಡತಿ ಇಬ್ಬರೂ ಬಿಡುಗಡೆಗೊಂಡಿದ್ದಾರೆ. ಆರೋಪಿಗಳು ಯಾವ ಉದ್ದೇಶಕ್ಕೆ ಗಾಂಜಾ ಬೆಳೆದಿದ್ದರು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಸದಾಶಿವನಗರದ ಎಮ್ಎಸ್ಆರ್ ನಗರದಲ್ಲಿ ವಾಸವಾಗಿದ್ದರು. ದಂಪತಿ ಮನೆ ಬಾಲ್ಕನಿಯಲ್ಲಿದ್ದ ಕುಂಡದಲ್ಲಿ ಗಾಂಜಾ ಗಿಡ ಬೆಳಸಿದ್ದರು.