C T Ravi Case | ರಾತ್ರಿ ಇಡೀ ಕಾರಿನಲ್ಲೇ ಸುತ್ತಾಡಿಸಿದ ಪೊಲೀಸರು: ಸಿ.ಟಿ ರವಿ ಆರೋಪ

ರಾತ್ರಿ 12.05ಕ್ಕೆ ಖಾನಾಪುರ ಪೊಲೀಸ್ ಠಾಣೆಯಿಂದ ತಮ್ಮನ್ನು ಸ್ಥಳಾಂತರ ಮಾಡಿದ ಪೊಲೀಸರು ರಾತ್ರಿ 12.45ಕ್ಕೆ ಕಿತ್ತೂರಿಗೆ ಆಗಮಿಸಿ ಅಲ್ಲಿ ಸುಮಾರು ಅರ್ಧ ಗಂಟೆ ಕಾಲ ಕಾರು ನಿಲ್ಲಿಸಿ ಕಾಲಹರಣ ಮಾಡಿದ್ದಾರೆ. ಬೆಂಗಳೂರಿಗೆ ಕರೆದೊಯ್ಯುವುದಾಗಿ ಹೇಳಿ ಬೆಳಗಾವಿ ಜಿಲ್ಲೆಯಲ್ಲೇ ರಾತ್ರಿ ಇಡೀ ಸುತ್ತಾಡಿಸಿದ್ದಾರೆ ಎಂದು ಸಿ ಟಿ ರವಿ ಆರೋಪಿಸಿದ್ದಾರೆ;

Update: 2024-12-20 06:19 GMT
ನಡುರಾತ್ರಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಸಿ ಟಿ ರವಿ
Click the Play button to listen to article

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಗುರುವಾರ ವಿಧಾನ ಪರಿಷತ್ ನಲ್ಲಿ ಅಶ್ಲೀಲ ಪದ ಬಳಕೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬೆಳಗಾವಿ ಗ್ರಾಮಾಂತರದ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಆದರೆ, ತಮ್ಮ ಬಂಧನದ ಬಳಿಕ ಪೊಲೀಸರು ಬೆಂಗಳೂರಿಗೆ ಕರೆದೊಯ್ಯುವುದಾಗಿ ಹೇಳಿ ರಾತ್ರಿ ಇಡೀ ಕಾರಿನಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ಸುತ್ತಾಡಿಸಿದ್ದಾರೆ ಎಂದು ಸಿ ಟಿ ರವಿ ಆರೋಪಿಸಿದ್ದಾರೆ.

ರಾತ್ರಿ 12.05ಕ್ಕೆ ಖಾನಾಪುರ ಪೊಲೀಸ್ ಠಾಣೆಯಿಂದ ಸ್ಥಳಾಂತರ ಮಾಡಿದ ಪೊಲೀಸರು, ರಾತ್ರಿ 12.45ಕ್ಕೆ ಕಿತ್ತೂರಿಗೆ ಆಗಮಿಸಿ ಅಲ್ಲಿ ಸುಮಾರು ಅರ್ಧ ಗಂಟೆ ಕಾಲ ಕಾರು ನಿಲ್ಲಿಸಿ ಕಾಲಹರಣ ಮಾಡಿದ್ದಾರೆ. ಬಳಿಕ ರಾತ್ರಿ 1.30ಕ್ಕೆ ಕಿತ್ತೂರಿನಿಂದ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಮಾರ್ಗವಾಗಿ ಮತ್ತೆ ಬೆಳಗಾವಿ ಜಿಲ್ಲೆಯ ಬೆಳವಡಿ ಗ್ರಾಮಕ್ಕೆ ತಲುಪಿದ್ದಾರೆ. ರಾತ್ರಿ 1.45ಕ್ಕೆ ಸವದತ್ತಿ ಪಟ್ಟಣಕ್ಕೆ ತಲುಪಿ 15 ನಿಮಿಷ ಕಾಲಹರಣ ಮಾಡಲಾಗಿದೆ. ತಡರಾತ್ರಿ 2.45 ಕ್ಕೆ ರಾಮದುರ್ಗದ ಡಿವೈಎಸ್‌ಪಿ ಕಚೇರಿಗೆ ಕರೆದೊಯ್ದಿದ್ದಾರೆ. ರಾಮದುರ್ಗ ಡಿವೈಎಸ್‌ಪಿ ಕಚೇರಿಯಲ್ಲಿ ತಮ್ಮ ತಲೆ ಗಾಯಕ್ಕೆ ಬ್ಯಾಂಡೇಜ್ ಹಾಕಿಸಿದ್ದಾರೆ. ನಸುಕಿನ 3.25ಕ್ಕೆ ರಾಮದುರ್ಗ ಡಿವೈಎಸ್‌ಪಿ ಕಚೇರಿಯಿಂದ ಹೊರಟ ಪೊಲೀಸರು ಅಲ್ಲಿಂದ ಎರಡು ಬಾರಿ ರಾಮದುರ್ಗ ಪಟ್ಟಣದ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಟ‌ ನಡೆಸಿದ್ದಾರೆ ಎಂದು ಸಿ ಟಿ ರವಿ ಹೇಳಿದ್ದಾರೆ. 

ಶೂಟ್‌ ಮಾಡಿ ಸಾಯಿಸಿ ಎಂದ ಸಿ.ಟಿ ರವಿ 

ಇದರಿಂದ ಆಕ್ರೋಶಗೊಂಡ ಸಿ.ಟಿ ರವಿ, ನಸುಕಿನ ಜಾವ 3 ಗಂಟೆಗೆ ರಸ್ತೆಯಲ್ಲೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನನ್ನು ಈ ರೀತಿ ಸುತ್ತಾಡಿಸುವ ಬದಲು ಶೂಟ್‌ ಮಾಡಿ ಸಾಯಿಸಿ. ನ್ಯಾಯಾಧೀಶರ ಮುಂದೆ ಯಾಕೆ ಹಾಜಾರುಪಡಿಸುತ್ತಿಲ್ಲ. ನನ್ನನ್ನು ಕೊಲೆ ಮಾಡ್ತೀರಾ ಎಂದು ಕೂಗಾಡಿದ್ದಾರೆ ಎನ್ನಲಾಗಿದೆ.

ಬಳಿಕ ರವಿಯನ್ನು ಕಾರಿಗೆ ಹತ್ತಿಸಿ ಮತ್ತೆ ಬಾಗಲಕೋಟೆ ಕಡೆಗೆ ಪ್ರಯಾಣ ಬೆಳೆಸಿ ನಸುಕಿನ ಜಾವ 4 ಗಂಟೆಗೆ ಲೋಕಾಪುರ ಬಳಿ ವಾಹನ ನಿಲ್ಲಿಸಿದ್ದಾರೆ. 4.30ಕ್ಕೆ ಯಾದವಾಡ ಬಳಿ ಸೇತುವೆ ಮೇಲೆ ಕಾರು ನಿಲ್ಲಿಸಿ ಪೊಲೀಸರ ಮಾತುಕತೆ ನಡೆದಿದೆ. ಬೆಳಗ್ಗೆ 4.50 ಗಂಟೆಗೆ ಹುಲಕುಂದ ಗ್ರಾಮದ ಬಳಿ ಕಾರು ನಿಲ್ಲಿಸಿ ಮತ್ತೆ ಮಾತುಕತೆ ನಡೆಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಬಟಕುರ್ಕಿ ಬಳಿ ಕಾರು ನಿಲ್ಲಿಸಿ ಬೆಳಿಗ್ಗೆ 6.40 ಕ್ಕೆ ಯರಗಟ್ಟಿ ಪಟ್ಟಣಕ್ಕೆ ಕರೆತಂದು ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಗೇಟ್‌ ಬಡಿದು ಸಿ.ಟಿ ರವಿ ತಲೆಗೆ ಗಾಯ

ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧ ಮಾನಹಾನಿಕರ ಪದ ಬಳಸಿದ ಆರೋಪದ ಹಿನ್ನಲೆಯಲ್ಲಿ ಅವರು ನೀಡಿದ ದೂರಿನ ಮೇಲೆ ಸಿ.ಟಿ ರವಿಯನ್ನು ಬಂಧಿಸಿರುವ ಖಾನಾಪುರ ಪೊಲೀಸರು, ರಾತ್ರಿ ವಿಚಾರಣೆ ನಡೆಸಿದ್ದಾರೆ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಲು ಮುಂದಾಗುವ ವೇಳೆ ಸಿ.ಟಿ ರವಿ ಅವರಿಗೆ ಠಾಣೆಯ ಗೇಟ್‌ ಬಡಿದು ತಲೆಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. 

ನನ್ನ ಜೀವಕ್ಕೆ ಅಪಾಯ ಇದೆ ಎಂದ ರವಿ

ಬಂಧನದ ಬಳಿಕ ಪೊಲೀಸ್ ಠಾಣೆ ಒಳಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಿ ಟಿ ರವಿ, ನನ್ನ ಜೀವಕ್ಕೆ ಅಪಾಯ ಇದೆ. ನನ್ನ ವಿರುದ್ದ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನನ್ನ ಜೀವಕ್ಕೆ ಅಪಾಯ ಇದೆ. ನನ್ನ ಜೀವಕ್ಕೇನಾದರೂ ಆದರೆ ಡಿ ಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್ ತಂಡವೇ ಕಾರಣ ಎಂದು ಹೇಳಿದ್ದಾರೆ. 

ಸಿ ಟಿ ರವಿ ಪ್ರತಿ ದೂರು

ಖಾನಾಪುರ ಠಾಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ ಟಿ ರವಿ ಪ್ರತಿ ದೂರು ದಾಖಲಿಸಿದ್ದಾರೆ. ಕೊಲೆಗೆ ಸಂಚು ಹೂಡಲಾಗಿದೆ ಎಂದು ಸಿ ಟಿ ರವಿ ಆರೋಪಿಸಿದ್ದಾರೆ. ಗುರುವಾರ ರಾತ್ರಿ ಖಾನಾಪುರ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ಸಿ ಟಿ ರವಿ ಅವರನ್ನು ಶಿಫ್ಟ್ ಮಾಡುತ್ತಾರೆ ಎನ್ನಲಾಗಿತ್ತು. ಪೊಲೀಸ್ ಠಾಣೆಯಿಂದ ಹೊರ ಬರುವ ವೇಳೆ ಸಿಟಿ ರವಿ ಹಣೆ ಮೇಲೆ ರಕ್ತದ ಕಲೆ ಕಾಣಿಸಿಕೊಂಡಿದೆ. ಅವರು ಗ್ಲಾಸ್ ಒಡೆದು ಹೊರ ಬರಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಕೊಲೆ ಮಾಡಲು ಯತ್ನ ಮಾಡ್ತಿದ್ದಾರೆಂದು ಸಿ ಟಿ ರವಿ ಆರೋಪಿಸಿದ್ದಾರೆ. ಠಾಣೆಯಿಂದ ಸಿ ಟಿ ರವಿ ಅವರನ್ನು ಪೊಲೀಸರು ಹೊತ್ತುಕೊಂಡು ಬಂದಿದ್ದಾರೆ. ಈ ವೇಳೆ ಸಿ ಟಿ ರವಿ ಅವರನ್ನು ಕರೆದೊಯ್ಯುವ ವಾಹನದ ಮೇಲೂ ದಾಳಿ ನಡೆದಿದೆ.

ಇನ್ನು ಖಾನಾಪುರ ಠಾಣೆಯ ಎದುರು ಮಾಧ್ಯಮಗಳಿಗೆ ಮಾತನಾಡಿದ ಸಿ ಟಿ ರವಿ, ಸಭಾಪತಿ ರೂಲಿಂಗ್ ಕೊಟ್ಟ ಮೇಲೆ ನನ್ನ ಮೇಲೆ ಪೊಲೀಸರು ಎಫ್ಐಆರ್ ಏಕೆ ಮಾಡಿದ್ರು. ಯಾವ ದುರುದ್ದೇಶಕ್ಕೆ ಪೊಲೀಸರು ಹೀಗೆ ಮಾಡಿದ್ದಾರೆ ಗೊತ್ತಿಲ್ಲ. ಇವರು ಯಾವ ಕಾರಣಕ್ಕೆ ಎಫ್ಐಆರ್ ಹಾಕಿದ್ದಾರೆ ಹೇಳಿಲ್ಲ. ಏಕೆ ಠಾಣೆಗೆ ಕರೆದುಕೊಂಡು ಬಂದು‌ ಕೂಡಿಸಿದ್ದಾರೆ, ಎಫ್ಐಆರ್ ಮಾಡಿದ್ದೇಕೆ ಗೊತ್ತಿಲ್ಲ. ಅಧಿಕೃತ ಕಸ್ಟಡಿಗೆ ತೆಗೆದುಕೊಂಡರೆ‌ ಮೊದಲು ನನಗೆ ಮಾಹಿತಿ ಕೊಡಬೇಕು. ಪೊಲೀಸರ ನಡುವಳಿಕೆ ಅನುಮಾನಸ್ಪದವಾಗಿದೆ. ಪರಿಷತ್ ಸಭಾಂಗಣದಲ್ಲಿ ಡಿಕೆಶಿ, ಹೆಬ್ಬಾಳ್ಕರ್ ನನಗೆ ನೇರ ಬೆದರಿಕೆ ಹಾಕಿದ್ದಾರೆ. ಪೊಲೀಸರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಎಂದರು.

ಪ್ರಕರಣದ ಹಿನ್ನೆಲೆ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆ ಸಂಬಂಧ ವಿಧಾನ ಪರಿಷತ್ ನಲ್ಲಿ ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಲಕ್ಷ್ಮೀ ಹೆಬ್ಬಾಳಕ‌ರ್ ಅವರ ಕುರಿತು ಸಿ.ಟಿ.ರವಿ ಮಾನಹಾನಿಕರ ಪದಬಳಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ವಿಧಾನಪರಿಷತ್‌ ಸಭಾಪತಿ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಸಂಬಂಧ ಕಾಂಗ್ರೆಸ್ ಮುಖಂಡರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ದೂರು ನೀಡಿದ್ದರು. ಸಿ.ಟಿ.ರವಿ ಅವರನ್ನು ಸದನದಿಂದ ಅಮಾನತುಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಹೆಬ್ಬಾಳ್ಳರ್‌ ಆಗ್ರಹಿಸಿದ್ದರು.

Tags:    

Similar News