ಸಿಎಂ ರಾಜೀನಾಮೆ ಕೇಳುವ ನೈತಿಕತೆ ವಿಪಕ್ಷಗಳಿಗಿಲ್ಲ; ಸಚಿವ ಈಶ್ವರ್‌ ಖಂಡ್ರೆ ವಾಗ್ದಾಳಿ

ಅತ್ಯಾಚಾರ‌ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ, ಜಮೀನು ಖರೀದಿ‌ ಹಗರಣದಲ್ಲಿ‌ ಭಾಗಿಯಾಗಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಂದ ಮೊದಲು ರಾಜೀನಾಮೆ ಪಡೆದು, ಉಚ್ಛಾಟಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಚಿವ ಈಶ್ವರ್‌ ಖಂಡ್ರೆ ಟಾಂಗ್‌ ನೀಡಿದರು.

Update: 2024-10-08 04:44 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಯಾವುದೇ ನೈತಿಕತೆ ಇಲ್ಲ. ಮೊದಲು ನಿಮ್ಮ ಪಕ್ಷಗಳಲ್ಲಿರುವ ಆರೋಪಿತ ಶಾಸಕರು ಹಾಗೂ ನಾಯಕರಿಂದ ರಾಜೀನಾಮೆ ಪಡೆಯಿರಿ‌ ಎಂದು ವಿಪಕ್ಷಗಳ ನಾಯಕರಿಗೆ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ತಿರುಗೇಟು‌ ನೀಡಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,‌ ಅತ್ಯಾಚಾರ‌ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ, ಜಮೀನು ಖರೀದಿ‌ ಹಗರಣದಲ್ಲಿ‌ ಭಾಗಿಯಾಗಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಂದ ಮೊದಲು ರಾಜೀನಾಮೆ ಪಡೆದು, ಪಕ್ಷದಿಂದ ಉಚ್ಛಾಟಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಟಾಂಗ್‌ ನೀಡಿದರು.

ನಿಮ್ಮ ಪಕ್ಷದಲ್ಲೇ ಗುರುತರ ಆರೋಪ ಹೊತ್ತವರಿದ್ದಾರೆ. ನೀವು ಬಿಜೆಪಿ ಅಧ್ಯಕ್ಷರಾಗಿ ಯಾವ ಕ್ರಮ ತೆಗೆದುಕೊಂಡಿದ್ದೀರಿ, ಸಿ.ಟಿ.ರವಿ, ಯಡಿಯೂರಪ್ಪ ವಿರುದ್ಧವೂ ಆರೋಪಗಳಿವೆ. ಅವರ ರಾಜೀನಾಮೆ ಕೇಳಿದ್ದೀರಾ ಎಂದು ಪ್ರಶ್ನಿಸಿದರು.

ಇನ್ನು ಜೆಡಿಎಸ್ ಪಕ್ಷದ ಶಾಸಕ ಎಚ್.ಡಿ. ರೇವಣ್ಣ ವಿರುದ್ಧ ಮಹಿಳೆ ಅಪಹರಣದ ಆರೋಪವಿದೆ. ಜೆಡಿಎಸ್ ವರಿಷ್ಠರು ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂದು ಕೇಳಿದರು.

ರಾಜ್ಯದಲ್ಲಿ‌ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ಜೆಡಿಎಸ್ ನವರು 1000 ಕೋಟಿ ತೆಗೆದಿರಿಸಿದ್ದಾರೆ ಎಂದು ನಿಮ್ಮ ಪಕ್ಷದ ಶಾಸಕರೇ ಹೇಳಿದ್ದಾರೆ. ಅವರ ವಿರುದ್ಧ ತನಿಖೆ‌ ಮಾಡಿದ್ದೀರಾ, ನಿಮ್ಮ ಹಾಗೂ ನಿಮ್ಮ ಕುಟುಂಬದ ಬಗ್ಗೆ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾಕಷ್ಟು ಬಾರಿ ಟೀಕೆಗಳನ್ನು ಮಾಡಿದ್ದಾರೆ. ಅವರ ವಿರುದ್ಧ ಯಾವ ರೀತಿ ಶಿಸ್ತುಕ್ರಮ ತೆಗೆದುಕೊಂಡಿದ್ದೀರಾ ಎಂದು ವಿಜಯೇಂದ್ರ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು.

ಯಾವುದೇ ಅವ್ಯವಹಾರ, ಅಕ್ರಮಗಳಿಲ್ಲದ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದುರುದ್ದೇಶದಿಂದ ಆರೋಪ ಮಾಡುತ್ತಿದ್ದೀರಿ, ನಿಮ್ಮ ಹೇಳಿಕೆಗಳು ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಒಬ್ಬ ಮುಗ್ದ ಹೆಣ್ಣುಮಗಳನ್ನು ಪ್ರಕರಣದಲ್ಲಿ ಅನವಶ್ಯಕವಾಗಿ ಎಳೆದು ತಂದಿರುವ ನೀವು ಒಮ್ಮೆ ಆತ್ಮಾವಲೋಕನ‌ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ರಾಜಕೀಯ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಇಳಿದಿದ್ದೀರಾ ಎಂಬುದು ರಾಜ್ಯದ ಜನತೆಗೆ ಅರ್ಥವಾಗುತ್ತಿದೆ. ನಾವು ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತಿದ್ದು, ಸರ್ಕಾರ ಸುಭದ್ರವಾಗಿರಲಿದೆ ಎಂದು ಹೇಳಿದರು.

ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ, ದುರಾಡಳಿತ ತುಂಬಿ ತುಳುಕುತ್ತಿತ್ತು. ಈಗ ಜೆಡಿಎಸ್ ಪಕ್ಷದ ಜೊತೆ ಸೇರಿ ಕುತಂತ್ರ ಮಾಡುತ್ತಿದ್ದೀರಾ. ನಕಲಿ ದಾಖಲೆ ಸೃಷ್ಟಿಸಿ, ಸುಳ್ಳು ಆರೋಪ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಮುಡಾ ಪ್ರಕರಣ ಪೂರ್ವಯೋಜಿತವಾಗಿದೆ. ಸಂಚು, ಷಡ್ಯಂತ್ರ ಮಾಡಿ ರಾಜ್ಯದ ಹೆಸರಿಗೆ ಕುತ್ತು ತರುವ ಕೆಲಸ ಮಾಡುತಿದ್ದೀರಾ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಕುತಂತ್ರ ಇಲ್ಲಿ ನಡೆಯಲ್ಲ. ನಾವು 136 ಶಾಸಕರು ಒಗ್ಗಟ್ಟಾಗಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಪರವಾಗಿ‌ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಪುಟ ಸದಸ್ಯರು, ಹೈಕಮಾಂಡ್ ಸಹಿತ ಎಲ್ಲರೂ ಬಂಡೆಯಂತೆ ನಿಂತಿದ್ದೇವೆ. ಪೂರ್ಣಾವಧಿಯ ಆಡಳಿತ ನಡೆಸಿಯೇ ತೀರುತ್ತೇವೆ‌‌ ಎಂದು ಹೇಳಿದರು.

Tags:    

Similar News