Micro Finance Ordinance | ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ವಾಪಸ್ ಕಳುಹಿಸಿದ ರಾಜ್ಯಪಾಲರು
ಸುಗ್ರೀವಾಜ್ಞೆಯಲ್ಲಿ ಸಾಲ ಕೊಟ್ಟವರ ಬಗ್ಗೆ ಕಾಳಜಿ ತೋರಿಸಿಲ್ಲ. 10 ವರ್ಷಗಳ ಶಿಕ್ಷೆ ಹಾಗೂ ₹5 ಲಕ್ಷ ದಂಡ ಹಾಕುವ ಪ್ರಸ್ತಾಪ ದುಬಾರಿಯಾಗಿದೆ ಎಂಬುದೂ ಸೇರಿದಂತೆ ಕೆಲವು ಕಾರಣಗಳನ್ನು ನೀಡಿ ಮರುಪರಿಶೀಲಿಸಿ ಕಳುಹಿಸುವಂತೆ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ.;
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ರಚಿಸಿ, ಅಂಕಿತಕ್ಕೆ ಕಳುಹಿಸಿದ್ದ ಸುಗ್ರೀವಾಜ್ಞೆ ಕರಡು ಮಸೂದೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ತಿರಸ್ಕರಿಸಿದ್ದಾರೆ.
ಸುಗ್ರೀವಾಜ್ಞೆ ಮಸೂದೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ನಿಯಂತ್ರಣಕ್ಕೆ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಸಾಲ ಕೊಟ್ಟವರ ಬಗ್ಗೆ ಯಾವುದೇ ಕಾಳಜಿ ತೋರಿಲ್ಲ. 10 ವರ್ಷಗಳ ಶಿಕ್ಷೆ ಹಾಗೂ ₹5 ಲಕ್ಷ ದಂಡ ಹಾಕುವ ಪ್ರಸ್ತಾಪ ದುಬಾರಿಯಾಗಿದೆ. ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಳಸಿ ಪೊಲೀಸ್ ಇಲಾಖೆಯೇ ಪರಿಸ್ಥಿತಿ ನಿಯಂತ್ರಿಸಬಹುದಾಗಿದೆ. ರಾಜ್ಯ ಸರ್ಕಾರ ರೂಪಿಸಿರುವ ಸುಗ್ರೀವಾಜ್ಞೆ ಮೈಕ್ರೋ ಫೈನಾನ್ಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಜೊತೆಗೆ ಅಗತ್ಯ ಹಣಕಾಸು ಸೌಲಭ್ಯ ಪಡೆಯುವ ಬಡವರಿಗೂ ಸಮಸ್ಯೆಯಾಗಲಿದೆ ಎಂದು ರಾಜಭವನ ಸುಗ್ರೀವಾಜ್ಞೆ ವಾಪಸ್ ಮಾಡಲು ಕಾರಣಗಳನ್ನು ಕೊಟ್ಟಿದೆ.
ಸಿಎಂ ಕಚೇರಿ ಸ್ಪಷ್ಟನೆ
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿರುವ ಕುರಿತು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಮೈಕ್ರೋ ಫೈನಾನ್ಸ್ ಕಂಪನಿಗಳ ದೌರ್ಜನ್ಯ ತಡೆಗಾಗಿ ಸುಗ್ರೀವಾಜ್ಞೆ ಮಸೂದೆ ರೂಪಿಸಿತ್ತು. ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದು, ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಿ, ಮರು ಪರಿಶೀಲಿಸಿದ ಬಳಿಕ ಅಂಕಿತಕ್ಕೆ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.
ಈ ಹಿಂದೆ ಕೂಡ ಸುಗ್ರೀವಾಜ್ಞೆ ಕರಡು ಪ್ರತಿಯಲ್ಲಿ ಕೆಲ ದೋಷಗಳನ್ನು ಸರಿಪಡಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಪರಿಷ್ಕರಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸುಗ್ರೀವಾಜ್ಞೆಗೆ ಕುರಿತು ವಿವರಣೆ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಪಾಲರು, ಆರ್‌ಬಿಐ ನಿಯಮಾವಳಿಯಂತೆ ಸಾಲ ನೀಡಲಾಗುತ್ತಿದೆ. ಸಾಲ ಪಡೆದವರ ರಕ್ಷಣೆ ಜೊತೆಗೆ ಸಾಲ ಕೊಟ್ಟವರ ಹಿತಾಸಕ್ತಿಯನ್ನು ಪರಿಗಣಿಸುವಂತೆ ಸೂಚಿಸಿ, ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ ಎಂದು ಹೇಳಿದೆ.